ಭಾರತದ ಯೋಜನೆ ಮತ್ತು ಅಭಿವೃದ್ಧಿ

ಸ್ವಾತಂತ್ರ್ಯೋತ್ತರ ಭಾರತದಲ್ಲಿ ರೂಪಿಸಿ ಅನುಷ್ಠಾನಿಸಲಾದ ಪಂಚವಾರ್ಷಿಕ ಯೋಜನೆಗಳು ಮತ್ತು ಇವುಗಳ ಫಲವಾಗಿ ದೇಶ ಸಾಧಿಸಿರುವ ಅಭಿವೃದ್ಧಿ ಇವನ್ನು ಸಮೀಕ್ಷಿಸುವ ಲೇಖನ.

	ಭಾರತದ ಅಭಿವೃದ್ಧಿಗೆ ಯೋಜನೆಯ ಅಗತ್ಯವಿದೆ ಎಂದು ಸ್ವಾತಂತ್ರ್ಯಕ್ಕೂ ಮುನ್ನ ಸರ್ ಎಂ. ವಿಶ್ವೇಶ್ವರಯ್ಯನವರು ತಮ್ಮ ಪ್ಲಾನ್ಡ್ ಎಕಾನಮಿ ಆಫ್ ಇಂಡಿಯಾ ಗ್ರಂಥದಲ್ಲಿ ಬರೆದಿದ್ದಾರೆ. 1950 ಮಾರ್ಚಿಯಲ್ಲಿ ಭಾರತ ಸರ್ಕಾರ ಯೋಜನಾಯೋಗ ರಚಿಸಿತು. ದೇಶದ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಳ್ಳವುದರೊಂದಿಗೆ ಜನರ ಜೀವನ ಮಟ್ಟವನ್ನೂ ಆದಾಯವನ್ನೂ ಹೆಚ್ಚಿಸುವುದರ ಮೂಲಕ ಭಾರತ ಅಭಿವೃದ್ಧಿ ಸಾಧಿಸುವುದು ಯೋಜನೆಯ ಮುಖ್ಯ ಉದ್ದೇಶ. ಈ ಮೊದಲು ಭಾರತದಲ್ಲಿ ಯೋಜನಾರಹಿತ ಆರ್ಥಿಕತೆಯಿತ್ತು. ಪಂಚವಾರ್ಷಿಕಯೋಜನೆಯಿಂದಾಗಿ 1951ರಿಂದ ಭಾರತದ ಆರ್ಥಿಕತೆ ಕ್ರೋಡೀಕೃತ ನಿರ್ದೇಶನಕ್ಕೆ ಒಳಗಾಗಿ ಪೂರ್ವಯೋಜಿತ ಕ್ರಮವನ್ನೊಳಗೊಂಡ ಯೋಜಿತ ಆರ್ಥಿಕತೆಯಾಗಿ ಪರಿವರ್ತಿತವಾಯಿತು. ಸ್ಪಷ್ಟವಾದ ಆರ್ಥಿಕ, ಸಾಮಾಜಿಕ ಗುರಿಗಳನ್ನು ಫೋಷಿಸಿ, ಗುರಿ ಸಾಧನೆಗೆ, ಆವಶ್ಯಕವಾದ ನೀತಿ ನಿಮಯಗಳನ್ನು ದೀರ್ಘಕಾಲೀನ ಹಾಗೂ ಅಲ್ಪಕಾಲೀನ ಯೋಜನೆಗಳಲ್ಲಿ ರೂಪಿಸಿ ಕೊಂಡು, ದೇಶದ ಆರ್ಥಿಕ ಮುನ್ನಡೆಯನ್ನು ಸರ್ಕಾರ ನಿರ್ದೇಶಿಸಲು ಉಪಕ್ರಮಿಸಿತು.

	ಯೋಜನೆಯ ಅಧಿಕೃತ ಹೊಣೆ ಕೇಂದ್ರ ಹಾಗೂ ರಾಜ್ಯಸರ್ಕಾರಗಳಿಗೆ ಸೇರಿದ್ದಾದರೂ ಅದರ ಯಶಸ್ವೀನಿರ್ವಹಣೆ ಆರ್ಥಿಕತೆಯ ಎಲ್ಲ ಅಂಗಸಂಸ್ಥೆಗಳ ಮತ್ತು ಜನತೆಯ ಸಹಕಾರವನ್ನು ಅವಲಂಬಿಸಿದೆ. ಭಾರತದ ಯೋಜನಾ ವ್ಯವಸ್ಥೆಯಲ್ಲಿ ಯೋಜನಾ ನಿಯೋಗ ಹಾಗೂ ಅದರ ವಿವಿಧ ಶಾಖೆ, ಉಪಶಾಖೆಗಳು ಈ ನಿಯೋಗ ಸ್ಥಾಪಿಸುವ ಇತರ ಕ್ರಿಯಾತಂಡಗಳು, ಸ್ಥಾಯಿ ಸಲಹಾ ಸಮಿತಿಗಳು, ಸಂಶೋಧನೆ ಹಾಗೂ ಸಮೀಕ್ಷಾ ಸಮಿತಿಗಳು; ಸಂಸ್ಥಾನ ಮತ್ತು ಜಿಲ್ಲಾ ಮಟ್ಟಗಳ ಯೋಜನಾ ಸಮಿತಿಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿ ಮಂಡಳಿ; ವಿವಿಧ ಸಚಿವ ಶಾಖೆಗಳ ಸಂಶೋಧನ ವಿಭಾಗಗಳು; ಕೇಂದ್ರೀಯ ಅಂಕೆ ಅಂಶವಿಭಾಗ ಅರ್ಥಶಾಸ್ತ್ರಜ್ಞರ ಮಂಡಲಿ, ಭಾರತದ ರಿಸರ್ವ್ ಬ್ಯಾಂಕ್; ವಿವಿಧ ಅಭಿವೃದ್ಧಿ ಸಮಿತಿಗಳು ಹಾಗೂ ಖಾಸಗಿ ಉದ್ಯಮಿಗಳ ಕೆಲವು ಪ್ರಮುಖಸಂಸ್ಥೆಗಳು ಸೇರಿವೆ. ಕಾಲಕಾಲಕ್ಕೆ ಯೋಜನೆಗಳನ್ನು ರೂಪಿಸುವುದೂ ಯೋಜಿತ ಕಾರ್ಯ ಕ್ರಮಗಳ ಫಲಾಫಲ ಸಮೀಕ್ಷೆ ನಡೆಸಿ ಯೋಜನೆಗಳ ಮೌಲ್ಯಮಾಪನ ಮಾಡುವುದೂ ಯೋಜನಾಕಾರ್ಯಕ್ರಮಗಳನ್ನು ಪುನರ್ವಿಮರ್ಶಿಸುವುದೂ ಈ ವ್ಯವಸ್ಧೆಯ ಕಾರ್ಯ. ಹೀಗೆ ಸಿದ್ಧವಾಗುವ ಯೋಜನೆಗಳನ್ನು ಅಧಿಕೃತವಾಗಿ ಅನುಮೋದಿಸುವ ಕರ್ತವ್ಯ ಕೇಂದ್ರ ಸಂಸತ್ತಿಗೂ ರಾಜ್ಯಗಳ ವಿಧಾನಸಭೆಗಳಿಗೂ ಸೇರಿದ್ದು. ಯೋಜನೆಯಲ್ಲಿ ಒಳಗೊಂಡವನ್ನು ಕಾರ್ಯಗತಮಾಡುವ ಜವಾಬ್ದಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೂ ಖಾಸಗಿ ವಲಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳ ಬಗ್ಗೆ ಖಾಸಗಿ ಉದ್ಯಮಿಗಳಿಗೂ ಸೇರಿದ್ದು.

	ಭಾರತದ ಯೋಜನೆಯ ವಿಶೇಷ ಲಕ್ಷಣಗಳು: ಇವು ಮುಖ್ಯವಾಗಿ ತೆರೆದ ಆರ್ಥಿಕತೆ, ಪ್ರಜಾಸತ್ತಾತ್ಮಕ ಮತ್ತು ಸಂಯುಕ್ತ ರಾಜ್ಯಮಾದರಿಯ ಮಿಶ್ರಾ ಆರ್ಥಿಕತೆ.

	ಮೊದಲನೆಯದಾಗಿ, ಭಾರತ ಪ್ರಪಂಚದ ನಾನಾರಾಷ್ಟ್ರಗಳೊಡನೆ ಆರ್ಥಿಕ ಸಂಬಂಧಗಳನ್ನು ಬೆಳೆಸಿಕೊಳ್ಳುವ ಧೋರಣೆ ಹೊಂದಿದ್ದು, ವಿಶ್ವಸಂಸ್ಧೆಯ ಆಶ್ರಯದಲ್ಲಿ ಸ್ಧಾಪನೆಯಾಗಿರುವ ಅನೇಕ ಆರ್ಥಿಕ, ಸಾಮಾಜಿಕ ಸಂಸ್ಥೆಗಳು. ಪ್ರಪಂಚಬ್ಯಾಂಕ್ ಹಾಗೂ ಅದರ ಸಹ ಸಂಸ್ಧೆಗಳು, ಅಂತಾರಾಷ್ಟ್ರೀಯ ವಿನಿಮಯ ನಿಧಿ. ಸುಂಕ ಹಾಗೂ ವ್ಯಾಪಾರ ಕುರಿತ ಸಾರ್ವತ್ರಿಕ ಒಪ್ಪಂದ, ಕೊಲೊಂಬೋ ಯೋಜನೆ ಇತ್ಯಾದಿ ಅಂತಾರಾಷ್ಟ್ರೀಯ ವ್ಯವಸ್ಥೆಗಳಲ್ಲಿ ಪಾಲುಗೊಂಡಿದ್ದು ತೆರೆದ ಆರ್ಥಿಕ ನೀತಿಯನ್ನು ಅನುಸರಿಸುತ್ತಿದೆ. ಇದರಿಂದ ಅನೇಕ ವಿಧದ ಅಂತಾರಾಷ್ಟ್ರೀಯ ಹೊಣೆಗಾರಿಕೆಗೆ ಭಾರತವೂ ಇತರ ಸದಸ್ಯ ರಾಷ್ಟ್ರಗಳಂತೆ ಬದ್ಧವಾಗಿದೆ.

	ಎರಡನೆಯದಾಗಿ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ್ದರಿಂದ ಯೋಜನೆಗಳನ್ನು ರೂಪಿಸುವುದರಲ್ಲಿಯೂ ಅನುಷ್ಠಾನಕ್ಕೆ ತರುವುದರಲ್ಲಿಯೂ ಪ್ರಜಾಸತ್ತೆಯ ಮೌಲ್ಯಗಳನ್ನು ಗಮನದಲ್ಲಿರಿಸಿಕೊಂಡಿದೆ. ಯೋಜನೆಯ ಕರಡು ಸಿದ್ಧವಾದಾಗಲೇ ಅದು ಸಾರ್ವಜನಿಕ ಪ್ರತಿಕ್ರಿಯೆ ಹಾಗೂ ತಜ್ಞರ ವಿಮರ್ಶೆಗೆ ಒಳಪಡುವ ಅವಕಾಶವಿರುವುದು. ಸಾರ್ವಜನಿಕ ಅಭಿಪ್ರಾಯ ಮತ್ತು ಸಲಹೆಗಳನ್ನು ಗಮನಿಸಿ ಯೋಜನೆಯ ಕರಡನ್ನು ಯುಕ್ತವಾಗಿ ಮಾರ್ಪಡಿಸಿ ಕೇಂದ್ರ ಹಾಗೂ ರಾಜ್ಯಗಳ ಚುನಾಯಿತ ಮುಖಂಡರನ್ನು ಪ್ರತಿನಿಧಿಸುವ ರಾಷ್ಟ್ರೀಯ ಅಭಿವೃದ್ಧಿ ಮಂತಳಿಯ ಒಪ್ಪಿಗೆ ಪಡೆದು ಕೊನೆಯಲ್ಲಿ ಸಂಸತ್ತಿನ ಅನುಮೋದನೆಯನ್ನೂ ಪಡೆಯಲಾಗುವುದು. ಅಲ್ಲದೆ, ಅಧಿಕಾರದಲ್ಲಿರುವ ರಾಜಕೀಯ ಪಕ್ಷ ವಿರೋಧಿ ಪಕ್ಷಗಳ ಸಹಕಾರ ಪಡೆದು ಯೋಜನಾಕಾರ್ಯಗಳನ್ನು ನಡೆಸಬೇಕೆಂಬ ಅಂಶವನ್ನು ಯೋಜನಾಮಂಡಳಿ ಮೊದಲನೆಯ ಯೋಜನೆಯಲ್ಲಿಯೇ ಒತ್ತಿಹೇಳಿದೆ. ಹೀಗೆ ಭಾರತದ ಯೋಜನೆಗಳು ಕೇಂದ್ರೀಕೃತ ಸರ್ವಾಧಿಕಾರ ಮಾದರಿಯ ಯೋಜನೆಯಾಗಿರದೆ ಪ್ರಜಾಸತ್ತಾತ್ಮಕ ಚೌಕಟ್ಟಿನೊಳಗೆ ರೂಪಿತವಾಗಿರುವವುಗಳಾಗಿವೆ.

	ಮೂರನೆಯದಾಗಿ, ಭಾರತ ರಾಜ್ಯಾಂಗ ರೀತ್ಯ ಆರ್ಥಿಕ ಹಾಗೂ ಸಾಮಾಜಿಕ ಯೋಜನೆ ಕೇಂದ್ರ ಮತ್ತು ರಾಜ್ಯಗಳೆರಡಕ್ಕೂ ಸೇರಿರುವ ಸಮಾನಾಧಿಕಾರ ಪಟ್ಟಿಗೆ ಸೇರಿದ ವಿಷಯ. ಇಂಥ ಪರಿಸ್ಥಿತಿಯಿರುವ ಸಂಯುಕ್ತ ರಾಜ್ಯಾಂಗದಲ್ಲಿ ಯೋಜನೆ ಬಗ್ಗೆ ವಿವಿಧ ಸರ್ಕಾರಗಳೊಳಗೆ ಉಂಟಾಗಬಹುದಾದ ವಿವಾದಗಳಿಂದ ಕೆಲವು ವಿಶೇಷ ಸಮಸ್ಯೆಗಳು ಉದ್ಭವಿಸುವುವು. ಕೇಂದ್ರ ಮತ್ತು ರಾಜ್ಯಗಳೊಳಗೂ ರಾಜ್ಯರಾಜ್ಯಗಳ ನಡುವೆಯೂ ಸಾಮರಸ್ಯ ಮತ್ತು ಹೊಂದಾಣಿಕೆ ಇರುವಂಥ ಏರ್ಪಾಡುಗಳು ಇಂಥ ಪರಿಸ್ಥಿತಿಯಲ್ಲಿ ಅವಶ್ಯ. ಭಾರತದಲ್ಲಿ ರಾಜ್ಯಾಂಗದ ಅನೇಕ ವಿಧಿಗಳು, ಮತ್ತು ರೂಢಿಯಿಂದ ಈ ಮೂರು ದಶಕಗಳಲ್ಲಿ ಬೆಳೆದುಬಂದಿರುವ ಸತ್ಸಂಪ್ರದಾಯಗಳು ಇಂಥ ಹೊಂದಾಣಿಕೆಗೆ ಮಾರ್ಗ ಮಾಡಿಕೊಟ್ಟಿವೆ. ಆದರೂ ಏಕತಾ ಮಾದರಿ ರಾಜ್ಯಾಂಗ ಹೊಂದಿರುವ ರಾಷ್ಟ್ರಗಳಿಗಿಂತಲೂ ಭಾರತದಂಥ ಸಂಯುಕ್ತ ರಾಜ್ಯಾಂಗ ಹೊಂದಿರುವ ರಾಷ್ಟ್ರಗಳಿಗಿಂತಲೂ ಭಾರತದಂಥ ಸಂಯುಕ್ತ ರಾಜ್ಯಾಂಗವಿರುವ ರಾಷ್ಟ್ರಗಳಲ್ಲಿ ಯೋಜನೆಗಳು ಹೆಚ್ಚು ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಕೇಂದ್ರದ ಒಟ್ಟು ರಾಷ್ಟ್ರೀಯ ದೃಷ್ಟಿಕೋನಗಳೊಳಗೆ ಉಂಟಾಗಬಹುದಾದ ಘರ್ಷಣೆ ಹಾಗೂ ಭಿನ್ನ ರಾಜಕೀಯ ನಿಲುವುಗಳಿಂದ ಉದ್ಭವಿಸಬಹುದಾದ ಬಿಗುವು ಇತ್ಯಾದಿಗಳು ಭಾರತದ ಯೋಜನೆಗಳಲ್ಲೂ ಕಾಣುವ ಸಮಸ್ಯೆಗಳು.

	ನಾಲ್ಕನೆಯದಾಗಿ ಭಾರತದ ಯೋಜನೆಗಳು ಅನಭಿವೃದ್ಧ ರಾಷ್ಟ್ರವೊಂದಕ್ಕೆ ಸಹಜವಾದ ನೂತನ ರಚನೆ ಮತ್ತು ಸಂಸ್ಧೆಗಳನ್ನು ನಿರ್ಮಿಸುವಂಥವು. ಕೃಷಿಕೈಗಾರಿಕೆ ಮತ್ತು ವಿವಿಧ ಸೇವಾ ಉದ್ಯಮಗಳೊಳಗೆ ಇರುವ ಅಸಮತೋಲನೆಯನ್ನು ಸರಿಪಡಿಸಿ ಸಮತೋಲನ ರಚನೆಯನ್ನು ನಿರ್ಮಿಸುವ ಮತ್ತು ಅನೇಕ ವಿಧಧ ಸಂಸ್ಧೆಗಳನ್ನು ಹೊಸದಾಗಿ ಸ್ಥಾಪಿಸುವ ಕಾರ್ಯವಾದ ಇಂಥ ರಚನಾತ್ಮಕ ಅಭಿವೃದ್ಧಿ ಯೋಜನೆಗಳಿಗಿಂತಲೂ ಹೆಚ್ಚು ವ್ಯಾಪಕವೂ ಕ್ಲಿಷ್ಟವೂ ಆಗಿವೆ.

	ಐದನೆಯದಾಗಿ ಭಾರತದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯ ಎರಡನ್ನು ಒಳಗೊಂಡ ಮಿಶ್ರ ಆರ್ಥಿಕ ವ್ಯವಸ್ಥೆ ಇದ್ದು ಅದರ ಯೋಜನೆಯೂ ಮಿಶ್ರ ಆರ್ಥಿಕ ಯೋಜನೆಯಾಗಿದೆ. ಇಂಥ ಮಿಶ್ರ ಆರ್ಥಿಕ ಯೋಜನೆಗಳಲ್ಲಿ ಸರ್ಕಾರಿ ವಲಯದ ಯೋಜನೆಗಳಿಗೆ ನೇರ ನಿರ್ದೇಶನ ಹಾಗೂ ನೇರ ನಿಯಂತ್ರಣ ತಂತ್ರಗಳನ್ನೂ ಖಾಸಗಿ ವಲಯದ ಯೋಜನೆಗಳಿಗೆ ಬಲುಮಟ್ಟಿಗೆ ಪರೋಕ್ಷ ನಿಯಂತ್ರಣ ಉತ್ತೇಜಕ ಹಾಗೂ ನಿರೋಧಕ ಕ್ರಮಗಳನ್ನೂ ಮತ್ತು ಪ್ರಚಾರ ಕ್ರಮಗಳ ಸಮ್ಮಿಳಿತ ತಂತರವನ್ನೂ ಉಪಯೋಗಿಸಬೇಕಾಗುವುದು.

	ಯೋಜನೆಯಲ್ಲಿ ಕಾಲಾವಧಿ ಒಂದು ಮುಖ್ಯ ಅಂಶ. ಭಾರತದಲ್ಲಿ 5 ವರ್ಷಗಳ ಅವಧಿಗೆ ಅನ್ವಯವಾಗುವಂತೆ ಉದ್ದೇಶಿತ ಗುರುಗಳೂ ಬಂಡವಾಳ ಮತ್ತು ಅದರ ವಿತರಣೆಯ ಕಾರ್ಯಕ್ರಮಗಳೂ ಅಳವಡಿಸಲ್ಪಟ್ಟಿವೆ. ವಾರ್ಷಿಕ ಯೋಜನೆಗಳು ಈ ಪಂಚವಾರ್ಷಿಕ ಯೋಜನೆಯ ಅಂಗ. 1978-79ರ ತನಕ ಪ್ರತೀಕ್ಷಾ ಯೋಜನೆಗಳ ಮುನ್ನೆಲೆಯಲ್ಲಿ ಪಂಚವಾರ್ಷಿಕ ಯೋಜನೆಗಳು ನಡೆದುಬಂದವು. ಮುಂದೆ 1978-79ರಿಂದ ಮುಂದುರುಳುವ ಯೋಜನೆ (ರೋಲಿಂಗ್ ಪ್ಲಾನ್) ಎಂಬ ಹೊಸ ವಿಧಾನವನ್ನು ಅನುಸರಿಸಲಾಗಿದೆ.

	ಯೋಜನೆಯ ಉದ್ದೇಶಗಳು: ಭಾರತದ ಯೋಜನೆಗಳು ಸಂವಿಧಾನ ಘೋಷಿತ ರಾಜ್ಯ ನಿರ್ದೇಶಕ ತತ್ತ್ವಗಳಿಗೆ ಮತ್ತು 1954ರಲ್ಲಿ ಸಂಸತ್ತು ಅನುಮೋದಿಸಿದ ಸಮಾಜವಾದಿ ಸಮಾಜ ಸ್ಧಾಪನೆಯ ಗುರಿಗೆ ಬದ್ಧವಾದವು. ಜನತೆಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ ಲಭಿಸುವಂಥ ಸಮಾಜ ನಿರ್ಮಾಣವೇ ರಾಜ್ಯ ನೀತಿಯಾಗಿರಬೇಕೆಂದು, ಸಂವಿಧಾನದಲ್ಲಿ ಘೋಷಿಸಲಾಗಿದೆ. ವೈಯಕ್ತಿಕ ಲಾಭಕ್ಕಿಂತ ಸಾಮಾಜಿಕ ಲಾಭ ಹೆಚ್ಚಿಸುವುದು, ಸಂಪತ್ತು ಮತ್ತು ಅಧಿಕಾರ ಇವುಗಳ ಖಾಸಗಿ ಕೇಂದ್ರೀಕರಣ ಹಾಗೂ ಏಕಸ್ವಾಮ್ಯ ತಪ್ಪಿಸುವುದು, ವರಮಾನ ಮತ್ತು ಉದ್ಯೋಗಾವಕಾಶ ಹೆಚ್ಚಿಸುವುದು, ವರಮಾನ ಮತ್ತು ಸಂಪತ್ತು ಹಂಚಿಕೆಯಲ್ಲಿ ಅಧಿಕ ಸಮಾನತೆ ಉಂಟು ಮಾಡುವುದು; ಪ್ರಜೆಗಳೆಲ್ಲರಿಗೂ ಸಾಕಷ್ಟು ಜೀವನಾಧಾರ ಸಾಧನಗಳನ್ನು ದೊರಕಿಸುವುದು; ದುರ್ಬಲ ವರ್ಗದವರಿಗೆ ಸಾಮಾಜಿಕ ರಕ್ಷಣೆ ಕೊಡಿಸುವುದು ಮುಂತಾದವನ್ನು ಒಳಗೊಂಡ ಸಮಾಜವಾದಿ ಸಮಾಜ ನಿರ್ಮಿಸುವುದು. ಅನಂತರ ಪೋಷಿಸುವುದು-ಇವು ಸರ್ಕಾರ ಅನುಮೋದಿಸಿರುವ ಮುಖ್ಯ ಅಂಶಗಳು. ಯೋಜನೆಗಳು ಹಾಕಿಕೊಂಡ ವಿವರವಾದ ಉದ್ದೇಶಗಳು ಇವುಗಳಿಗೆ ಅನುಸಾರವಾಗಿವೆ.

	ಮೊದಲನೆಯ ಯೋಜನೆ 1951-56: ಇದರ ಮುಖ್ಯ ಉದ್ದೇಶ ಎರಡನೆಯ ಮಹಾಯುದ್ಧದ ಮತ್ತು ಭಾರತ ಹಾಗೂ ಪಾಕಿಸ್ತಾನ ಇಬ್ಭಾಗವಾದುದರ ದುಷ್ಪರಿಣಾಮಗಳನ್ನೂ ಅನೇಕ ವಿಧದ ಅಸಮತೋಲಗಳನ್ನೂ ನಿವಾರಿಸಿ ರಾಷ್ಟ್ರೀಯ ವರಮಾನ ಮತ್ತು ಜನತೆಯ ಜೀವನಮಟ್ಟ ಏರುವಂತೆ ಮಾಡಬಲ್ಲ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸುವುದಾಗಿತ್ತು. ಎರಡನೆಯ ಯೋಜನೆಯ (1956-61) ಉದ್ದೇಶಗಳಿವು: 1 ರಾಷ್ಟ್ರೀಯ ವರಮಾನದ ಶೇಕಡಾ 25ರಷ್ಟು ಹೆಚ್ಚುವರಿ, 2 ಮೂಲ ಹಾಗೂ ಸ್ಥೂಲ ಕೈಗಾರಿಕೆಗಳಿಗೆ ಆದ್ಯತೆ ನೀಡಿ ಶೀಘ್ರ ಕೈಗಾರಿಕತೆ ಸಾಧಿಸುವುದು. 3 ಉದ್ಯೋಗಾವಕಾಶಗಳ ವಿಸ್ತರಣೆ, 4 ವರಮಾನ ಮತ್ತು ಸಂಪತ್ತಿನ ವಿತರಣಾ ಅಸಮಾನತೆಯಲ್ಲಿ ಇಳುವರಿ, 5 ಆರ್ಥಿಕ ವಿತರಣೆಯ ಅಧಿಕಾರದ ಸಮಾನತೆ, 6 ಹೂಟೆ ದರವನ್ನು ರಾಷ್ಟ್ರೀಯ ವರಮಾನದ ಶೇಕಡಾ 7ರಿಂದ ಶೇಕಡಾ 11ಕ್ಕೆ ಹೆಚ್ಚುಸುವುದು.

	ಮೂರನೆಯ ಯೋಜನೆ (1961-66) ಮುಖ್ಯವಾಗಿ ದೇಶದ ಆರ್ಥಿಕತೆಯನ್ನು ಸ್ವಾವಲಂಬಿತ ಹಾಗೂ ಸ್ವಸಾಮಥ್ರ್ಯದಿಂದ ಬೆಳೆಸುವತ್ತ ತನ್ನ ಗುರಿ ಘೋಷಿಸಿತು. ಈ ಯೋಜನೆಯ ನಿರ್ದಿಷ್ಟ ಉದ್ದೇಶಗಳಿವು: 1 ವರ್ಷಕ್ಕೆ ಶೇಕಡಾ 5ರಂತೆ ರಾಷ್ಟ್ರೀಯ ವರಮಾನ ಹೆಚ್ಚಿಸುವುದು. 2 ಮುಂಬರುವ ಯೋಜನಾ ಅವಧಿಗಳಲ್ಲಿಯೂ ಈ ಶೇಕಡಾ 5ರ ಬೆಳವಣಿಗೆ ದರವನ್ನು ಸಾಧಿಸುವಂಥ ಹೂಟೆ ಮಾದರಿಯನ್ನು ರೂಪಿಸುವುದು, 3 ಆಹಾರ ಧಾನ್ಯಗಳಲ್ಲಿ ಸ್ವಯಂ ಪೂರ್ಣತೆ ಸಾಧಿಸುವುದು ಮತ್ತು ಕೃಷ್ಯುತ್ಪನ್ನಗಳನ್ನು ಸಾಕಷ್ಟು ಹೆಚ್ಚಿಸಿ ಕೈಗಾರಿಕೆಗಳಿಗೆ ಬೇಕಾಗುವ ಕಚ್ಚಾ ಸಾಮಗ್ರಿಗಳನ್ನು ಒದಗಿಸಿರುವ ಜೊತೆಗೆ ಆ ಉತ್ಪನ್ನಗಳನ್ನು ರಫ್ತಿಗೂ ಪೂರೈಸುವುದು. 4 ಎರಡನೆಯ ಯೋಜನೆಯಲ್ಲಿ ಆರಂಭಿಸಿದ ಶೀಘ್ರ ಕೈಗಾರಿಕತೆಯ ಕಾರ್ಯಕ್ರಮಗಳನ್ನು ಮುಂದುವರಿಸುವುದು, 5 ದೇಶದ ಮಾನವ ಬಲವನ್ನು ಪೂರ್ಣವಾಗಿ ಉಪಯೋಗಿಸಿಕೊಳ್ಳುವುದು, 6 ಜನತೆಗೆ ಸಮಾನಾವಕಾಶಗಳನ್ನು ಕಲ್ಪಿಸುವುದು, 7 ವರಮಾನ, ಸಂಪತ್ತು ಮತ್ತು ಆರ್ಥಿಕ ಅಧಿಕಾರ ವಿತರಣೆಯಲ್ಲಿ ಅಸಮಾನತೆ ಕಡಿಮೆಮಾಡುವುದು.

	ಮೂರನೆಯ ಯೋಜನೆ ತರುವಾಯ ಭಾರತ-ಪಾಕಿಸ್ತಾನ ಯುದ್ಧದ ಪರಿಣಾಮಗಳಿಂದಲೂ ಎರಡು ವರ್ಷಗಳು (1966-68) ಪ್ರಾಪ್ತವಾದ ಘೋರಕ್ಷಾಮ ಪರಿಸ್ಧಿತಿಯಿಂದಲೂ ರೂಪಾಯಿಯ ಹೊರಮೌಲ್ಯ ಇಳುವರಿಯಿಂದಲೂ ನಾಲ್ಕನೆಯ ಯೋಜನೆಯನ್ನು ಸಿದ್ಧಪಡಿಸುವುದು ಕಷ್ಟವಾದುದರಿಂದ ಮುಂದಿನ ಮೂರು ವರ್ಷಗಳನ್ನು ವಾರ್ಷಿಕ ಯೋಜನೆಗಳಾಗಿ ಅನುಸರಿಸಲಾಯಿತು. ಅನಂತರ ಜಾರಿಗೆ ಬಂದ ನಾಲ್ಕನೆಯ ಯೋಜನೆ (1968-74) ಸ್ಥಿಮಿತ ಅಭಿವೃದ್ಧಿ ವರ್ಷಕ್ಕೆ ಶೇಕಡಾ 5.7ರಷ್ಟು ವರಮಾನ ಹೆಚ್ಚುವರಿ, ಕೃಷಿ ಉತ್ಪನ್ನ ಏರಿಳಿತಗಳ ನಿಯಂತ್ರಣ, ವಿದೇಶೀ ನೆರವಿನ ಅನಿಶ್ಚಿಕತೆಯ ತೊಡಕುಗಳನ್ನು ಎದುರಿಸುವಿಕೆ, ಸಮಾಜದ ದೀನದಲಿತ ವರ್ಗದವರ ಸ್ಥಿತಿಗತಿಗಳನ್ನು ಉತ್ತಮಪಡಿಸುವಿಕೆ ಮುಂತಾದ ಉದ್ದೇಶಗಳನ್ನು ವಿಶೇಷವಾಗಿ ಒತ್ತಿಹೇಳಿತು. ಹಣದುಬ್ಬರ ಹಿಂದೆಂದಿಗಿಂತಲೂ ತೀವ್ರಗೊಂಡ ಪರಿಸ್ಥಿತಿಯಲ್ಲಿ ಕೈಗೊಂಡ ಐದನೆಯ ಯೋಜನೆ (1974-79) ಹಣದುಬ್ಬರ ತಡೆಗೆ ಹೆಚ್ಚು ಆದ್ಯತೆ ನೀಡಿತಲ್ಲದೆ ರಾಷ್ಟ್ರೀಯ ವರಮಾನದಲ್ಲಿ ವರ್ಷಕ್ಕೆ ಶೇಕಡಾ 5.5ರಷ್ಷು ಹೆಚ್ಚುವರಿ ಬಡತನ ರೇಖೆಯ ಕೆಳಗಿರುವ ಜನಾಂಗದ ಉದ್ಧಾರ, ನಿರುದ್ಯೋಗ ನಿವಾರಣೆ, ಸ್ವಾವಲಂಬನೆ ಈ ಉದ್ದೇಶಗಳನ್ನು ಒತ್ತಿ ಹೇಳಿತು ಕೂಡ. ಏಕಪ್ರಕಾರವಾಗಿ ಹೆಚ್ಚುತ್ತ ಬಂದಿರುವ ಬಡಜನರ ಸಂಖ್ಯೆ ನಿರುದ್ಯೋಗ, ಗ್ರಾಮನಗರಗಳೊಳಗಿನ ಪ್ರಾದೇಶಿಕ ಅಸಮತೆ ಇತ್ಯಾದಿ ಅಂಶಗಳನ್ನು ಗಮನಿಸಿ ಈ ಯೋಜನೆ ಹತ್ತು ವರ್ಷಗಳ ಅವಧಿಯೊಳಗೆ ಕೆಳಗಣ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಘೋಷಿಸಿದೆ: ನಿರುದ್ಯೋಗ ಮತ್ತು ಅಪೂರ್ಣ ಉದ್ಯೋಗದ ನಿವಾರಣೆ, ಅತ್ಯಂತ ಬಡಜನರ ಜೀವನಮಟ್ಟದಲ್ಲಿ ಗಮನಾರ್ಹ ಏರಿಕೆ, ಕೆಳಮಟ್ಟ ವರಮಾನ ಗುಂಪಿನಲ್ಲಿರುವ ಜನತೆಗೆ ಕುಡಿಯುವ ಶುದ್ಧ ನೀರು, ಅಕ್ಷರತೆ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ, ಆರೋಗ್ಯಸೇವೆಗಳು, ಉತ್ತಮ ಗ್ರಾಮೀಣ ರಸ್ತೆ ಮತ್ತು ಗ್ರಾಮೀಣ ವಸತಿ ಸೌಕರ್ಯ ಇತ್ಯಾದಿ ಮೂಲಭೂತ ಕನಿಷ್ಠ ಅವಶ್ಯಕತೆಗಳನ್ನು ಒದಗಿಸುವುದು, ವರಮಾನ ಮತ್ತು ಸಂಪತ್ತಿನ ವಿತರಣೆಯಲ್ಲಿ ಪ್ರಸಕ್ತ ಇರುವ ಅಂತರಗಳನ್ನು ಗಮನಾರ್ಹವಾಗಿ ಕಡಿಮೆಮಾಡುವುದು ಮತ್ತು ದೇಶದ ಸ್ವಾವಲಂಬನೆಯತ್ತ ಪ್ರಗತಿ ಸಾಧಿಸುವುದು. 1978-83ರ ಯೋಜನೆಯಲ್ಲಿ ಹೀಗೆ ಘೋಷಿತವಾಗಿರುವ ಉದ್ದೇಶಗಳು ಹಿಂದಿನ ಯೋಜನೆಗಳ ಉದ್ದೇಶಗಳ ನಿರೂಪಣೆಗಿಂತಲೂ ಹೆಚ್ಚು ನಿರ್ದಿಷ್ಟವಾಗಿವೆಯೆಂದು ಹೇಳಬಹುದು. ಯೋಜನೆಗಳು ಒಳಕೊಳ್ಳುವ ಕಾರ್ಯಕ್ರಮಗಳು, ನೀತಿಗಳು, ಬಂಡವಾಳವಿತರಣೆ ಇತ್ಯಾದಿಗಳು ಕ್ರಮಬದ್ಧವಾಗಿರಬೇಕಾದರೆ ವಿವಿಧ ಉದ್ದೇಶಗಳ ಸಾಪೇಕ್ಷ ಪ್ರಾಮುಖ್ಯ ಸ್ಪಷ್ಟವಾಗಿ ನಿರೂಪಿಸಲ್ಪಟ್ಟಿರಬೇಕು. ಹೀಗಿಲ್ಲದುದು ಹಿಂದಿನ ಎಲ್ಲ ಯೋಜನೆಗಳ ಒಂದು ದೋಷವಾಗಿತ್ತೆನ್ನಬಹುದು

ಯೋಜನಾ ವೆಚ್ಚ ವಿತರಣೆ: ಮೇಲೆ ವಿವರಿಸಿರುವ ಪಂಚವಾರ್ಷಿಕ ಯೋಜನೆಗಳ ಉದ್ದೇಶಕ್ಕೆ ಅನುಸಾರವಾಗಿ ಕಾರ್ಯಕ್ರಮಗಳನ್ನೂ ವಿವಿಧ ಆರ್ಥಿಕ ನೀತಿಗಳನ್ನೂ ವೆಚ್ಚವನ್ನೂ ಕೈಗೊಳ್ಳಲಾಗಿದೆ. ಇಲ್ಲಿಯತನಕದ ಯೋಜನಾವೆಚ್ಚ ವಿವಿಧ ಮುಖ್ಯ ಬಾಬುಗಳಲ್ಲಿ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ಕೆಳಗಿನ ಪಟ್ಟಿಯಲ್ಲಿ ತೋರಿಸಿದೆ.

	ಭಾರತದ ಯೋಜನೆಗಳ ಪ್ರಕಾರ 1951-79 ಅವಧಿಯ 28 ವರ್ಷಗಳಲ್ಲಿ ಅಭಿವೃದ್ಧ ಯೋಜನಾವೆಚ್ಚ ಸರ್ಕಾರಿ ವಲಯದಲ್ಲಿ ರೂ 77,387 ಕೋಟಿ. ಖಾಸಗಿ ವಲಯದಲ್ಲಿ ರೂ 48,668 ಕೋಟಿ. ಇವೆರಡೂ ಸೇರಿ ಒಟ್ಟು ರೂ 1,26,055 ಕೋಟಿ ಆಗಿವೆ. ಪ್ರಸಕ್ತ ಜಾರಿಗೆ ತರಲಾಗಿರುವ 1978-83ರ ಯೋಜನೆಯಲ್ಲಿ ಒಟ್ಟು ರೂ 1,16,240 ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ. ಪಂಚವಾರ್ಷಿಕ ಯೋಜನೆಗಳ ಯೋಜನಾವೆಚ್ಚ ಹೆಚ್ಚಾಗುತ್ತಾ ಬಂದಿದೆ ಎಂಬುದನ್ನು ಮೇಲಿನ ಪಟ್ಟಿಯಲ್ಲಿ ಗಮನಿಸಬಹುದು. ಈ ಹೆಚ್ಚುವರಿಗೆ ಬೆಲೆಗಳ ಏರಿಕೆ ಕಾರಣವಾಗಿದ್ದರೂ ಯೋಜನಾಭಿವೃದ್ಧಿ ಕಾರ್ಯಗಳು ಕಾಲಕ್ರಮೇಣ ಹೆಚ್ಚು ವ್ಯಾಪಕವಾಗಿಯೂ ವೇಗವಾಗಿಯೂ ಮುಂದುವರಿದಿರುವುದನ್ನು ಕೂಡ ಇದು ಸೂಚಿಸುವುದು. ಒಟ್ಟು ಯೋಜನಾ ವೆಚ್ಚದಲ್ಲಿ ಶೇಕಡಾ 61.4ರಷ್ಟು ಭಾಗ ಸಾರ್ವಜನಿಕವಲಯದಲ್ಲಿಯೂ 39.6ರಷ್ಟು ಭಾಗ ಖಾಸಗಿವಲಯದಲ್ಲಿಯೂ ಆಗಿರುವುದು ಭಾರತದ ಅಭಿವೃದ್ದಿ ಯೋಜನೆಯಲ್ಲಿ ಸರ್ಕಾರದ ಪ್ರಧಾನ ಪಾತ್ರವನ್ನು ಸೂಚಿಸುವುದು. ವಿಸ್ತರಿಸಿರುವ ಸರ್ಕಾರದ ಪಾತ್ರಕ್ಕೆ ಅನುಗುಣವಾಗಿ ಸರ್ಕಾರದ ಆಡಳಿತ ವ್ಯವಸ್ಧೆಯೂ ವಿಸ್ತರಿಸಿದೆ ಮತ್ತು ಯೋಜನೆಯ ಯಶಸ್ವಿ ನಿರ್ವಹಣೆ ಬಲುಮಟ್ಟಿಗೆ ಸರ್ಕಾರಿ ಆಡಳಿತ ದಕ್ಷತೆಯನ್ನು ಅವಲಂಬಿಸುವಂತಾಗಿದೆ.

	ಕೃಷಿ ಅಭಿವೃದ್ಧಿ: ಭಾರತದ ಕೃಷಿ ಪದ್ಧತಿಯನ್ನು ಆಧುನೀಕರಿಸಿ ಕೃಷಿ ಉತ್ಪಾದನೆಯನ್ನು ಪರಮಾವಧಿಗೊಳಿಸುವುದಕ್ಕೆ ಸಹಾಯಕವಾದ ಯೋಜಿತ ಕಾರ್ಯಕ್ರಮಗಳಲ್ಲಿ ನೀರಾವರಿ ವಿಸ್ತರಣೆ, ಯಂತ್ರೋಪಕರಣಗಳು, ಗೊಬ್ಬರ ಉತ್ತಮಬೀಜ ಇತ್ಯಾದಿಗಳ ಸರಬರಾಯಿ ವ್ಯವಸ್ಧೆ, ಕೃಷಿಸಾಲ, ಕೃಷಿ ಉತ್ಪನ್ನ ಮಾರಾಟ ಇವುಗಳಿಗಾಗಿ ವಿವಿಧ ಸಂಸ್ಥೆಗಳ ಸ್ಧಾಪನೆ, ಭೂಸುಧಾರಣೆಗಳು, ಸಾಮುದಾಯಿಕ ಅಭಿವೃದ್ಧಿ ಮತ್ತು ಪಂಚಾಯತಿ ರಾಜ ವ್ಯವಸ್ಥೆ, ಗ್ರಾಮೀಣ ವಿದ್ಯುಚ್ಛಕ್ತಿ ಪ್ರಸರಣ. ಕೃಷಿ ಸಂಶೋಧನೆ. ಕೃಷಿ ಸಂಬಂಧಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಮುಂತಾದವು ಒಳಗೊಂಡಿವೆ. ಈ ವಿವಿಧ ಕಾರ್ಯಕ್ರಮಗಳಿಗೆಲ್ಲ 1951-79 ಅವಧಿಯಲ್ಲಿ ಹಿಂದೆ ಹೇಳಿದಂತೆ ಸರ್ಕಾರ ಒಟ್ಟು ರೂ 10-517 ಕೋಟಿ ವೆಚ್ಚಮಾಡಿದೆ. ಪ್ರಧಾನವಾಗಿ ಖಾಸಗಿ ವಲಯದ ಉದ್ಯಮವಾಗಿ ಮುಂದುವರಿಯುತ್ತಿರುವ ಕೃಷಿಚಟುವಟಿಕೆಗಳಿಗೆ ಈ ಕಾರ್ಯಕ್ರಮಗಳು ಸಹಾಯಕವಾಗಿವೆ.

	ಭಾರತದ ಯೋಜನೆಗಳಲ್ಲಿ ಭಾರಿ ನೀರಾವರಿ ಯೋಜನೆಗಳಿಗೆ ಪ್ರಾಮುಖ್ಯ ನೀಡಲಾಗಿದೆ. ನೀರಾವರಿಗಾಗಿ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ನದಿ ನೀರನ್ನು ಬಳಸಿಕೊಳ್ಳಲಾಗಿದೆ. ಈ ಬಗೆಯ ಅವಕಾಶವಿಲ್ಲದಿರುವ ಸ್ಧಳಗಳಲ್ಲಿ ಕೆರೆ ಮತ್ತು

ಬಾಬು
ಯೋಜನಾ ವೆಚ್ಚ ವಿತರಣೆ ಕೋಟಿ ರೂಪಾಯಿಗಳಲ್ಲಿ

ಮೊದಲನೆಯ ಯೋಜನ
ಎರಡನೆಯ ಯೋಜನೆ
ಮೂರನೆಯ ಯೋಜನೆ
ಮೂರು ವಾರ್ಷಿಕ ಯೋಜನೆಗಳು
ನಾಲ್ಕನೆಯ ಯೋಜನೆ
ಐದನೆಯ ಯೋಜನೆ
ಒಟ್ಟು 1951-79
1978-83ರ ಕರಡು ಯೋಜನೆ

ಕೃಷಿ
290
(14.8)
549
(11.7)
1089
(12.7)
1107
(16.7)
2320
(14.7)
5162
(12.5)
10.517
(13.6)
9525
(13.7)

ನೀರಾವರಿ ಮತ್ತು ಪ್ರವಾಹ ಹತೋಟಿ
434
(22.2)
430
(9.2)
665
(7.8)
471
(7.1)
1354
(8.6)
2892
(9.4)
6.246
(8.1)
7925
(11.5)

ಚಾಲಕ ಶಕ್ತಿ (ವಿದ್ಯುತ್)
149
(7.6)
452
(9.7)
12.52
(14.6)
1210
(18.3)
2932
(18.6)
7618
(18.8)
13,613
(17.6)
15,750
(22.7)

ಕೈಗಾರಿಕೆ ಮತ್ತು ಖನಿಜಗಳು
96
(4.9)
1125
(24)
1960
(23)
1623
(25.4)
3241
(19.7)
9993
(24.8)
18,038
(23.3)
14,750
(21.2)

ಸಾರಿಗೆ ಮತ್ತು ಸಂಪರ್ಕ
518
(26.4)
1261
(27)
2118
(24.6)
1222
(18.5)
3080
(19.5)
7020
(17.9)
15,219
(19.6)
10,625
(15.3)

ಸಾಮಾಜಿಕ ಸೇವೆಗಳು
473
(24.1)
855
(18.3)
1493
(17.4)
992
(14.7)
2985
(18.9)
6956
(16.6)
(13,754)
(17.8)
10,805
(15.6)

ಸರ್ಕಾರಿವಲಯ ಒಟ್ಟು ಖಾಸಗಿವಲಯದಲ್ಲಿ ಹೂಟೆ 
1960
1800
4672
3100
8577
4100
6625
3640
15,912
8.980
39,641
27,048
77,387
48,668
69,380
46,860

ಸರ್ಕಾರಿ ಮತ್ತು ಖಾಸಗಿ ವಲಯಗಳು ಒಟ್ಟು ವೆಚ್ಚ
3760
7772
12677
10265
24,892
66,689
1,26,055
1,16,240

ಬಾವಿ ನೀರನ್ನು ಸಣ್ಣ ನೀರಾವರಿ ಅಭಿವೃದ್ಧಿಗಾಗಿ 1951-79 ಅವಧಿಯ ಯೋಜನೆಗಳಲ್ಲಿ ಒಟ್ಟು ರೂ 6794 ಕೋಟಿ ವೆಚ್ಚವಾಗಿದೆ. ಇದರ ಫಲವಾಗಿ ಸುಮಾರು 33.7 ದಶಲಕ್ಷ ಹೆಕ್ಟೇರುಗಳ ಹೊಸ ಭೂಮಿಗೆ ನೀರಾವರಿ ಸೌಕರ್ಯ ಕಲ್ಪಿಸಿದಂತಾಗಿದೆ. 1978-79ರಿಂದ ಜಾರಿಗೆ ಬಂದಿರುವ ಹೊಸ ಪಂಚವಾರ್ಷಿಕ ಯೋಜನೆಯಲ್ಲಿ ಸಣ್ಣ ನೀರಾವರಿ ಕಾರ್ಯಕ್ರಮಗಳಿಗೂ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆಯಲ್ಲದೆ 1982-83ರ ವೇಳೆಗೆ ಸಾಗುವಳಿಯಾದ ಭೂಮಿಯ ಶೇಕಡಾ 50ರಷ್ಟಕ್ಕೆ ನೀರಾವರಿ ಸೌಲಭ್ಯ ದೊರಕಿಸುವ ಗುರಿಯನ್ನೂ ಇಟ್ಟುಕೊಳ್ಳಲಾಗಿದೆ.

	ಕೇವಲ ಜಲಸೌಲಭ್ಯಮಾತ್ರದಿಂದ ಕೃಷಿ ಉತ್ಪನ್ನ ಏರುವುದಿಲ್ಲವೆಂಬುದನ್ನು ಗಮನಿಸಿ ಉತ್ತಮ ಬೀಜ, ರಾಸಾಯನಿಕಗೊಬ್ಬರ, ಕ್ರಿಮಿಕೀಟ ನಾಶಕಗಳು, ಯಂತ್ರ ಹಾಗೂ ಯಂತ್ರೋಪಕರಣಗಳು ಇತ್ಯಾದಿಗಳನ್ನು ರೈತರಿಗೆ ಸುಲಭದರದಲ್ಲಿ ಒದಗಿಸುವ ಮತ್ತು ಹೊಸ ಕೃಷಿತಂತ್ರ ಪ್ರಯೋಗಿಸುವ ವಿಧಾನ ಹಾಗೂ ಬೋಧಿಸುವ ವ್ಯವಸ್ಥೆಯ ಏರ್ಪಾಡುಗಳನ್ನು ಯೋಜಿಸಲಾಯಿತು. ಒಟ್ಟಿನಲ್ಲಿ ಇವು ಗೋದಿಬೆಳೆ ಮತ್ತು ಕೆಲವು ಪ್ರದೇಶಗಳ ಕೃಷಿಯ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿರುವುದರಿಂದ ದೇಶದಲ್ಲಿ ವ್ಯಾಪಕ ಕೃಷಿವಿಧಾನ ಕ್ರಾಂತಿ ಇನ್ನೂ ಉಂಟಾಗಿಲ್ಲವೆಂದು ಹೇಳಬಹುದು.

	ಆಹಾರಧಾನ್ಯಗಳ ಉತ್ಪಾದನೆ 1950-51ರಲ್ಲಿ ಸುಮಾರು 55 ದಶಲಕ್ಷ ಟನ್‍ಗಳಷ್ಷು ಇದ್ದುದ್ದು 1976-77ರಲ್ಲಿ ಸುಮಾರು 112 ದಶಲಕ್ಷ ಟನ್ನುಗಳಷ್ಟಾಯಿತು. ಇದೇ ಅವಧಿಯಲ್ಲಿ ಕಬ್ಬು, ಹತ್ತಿ, ನೆಲಗಡಲೆ, ಹೊಗೆಸೊಪ್ಪು, ಟೀ ಮುಂತಾದವು ಸುಮಾರು ಎರಡರಷ್ಟು ಹೆಚ್ಚಿದುವು. ಆದರೆ ಈ ಹೆಚ್ಚುವರಿ ಯೋಜಿತಗುರಿಯನ್ನು ಮುಟ್ಟದೆ ಕಡಿಮೆಯಾದುವು. ಸಮಗ್ರವಾಗಿ ಹೇಳುವುದಾದರೆ, ಕೃಷಿ ಉತ್ಪಾದನೆಯ ಹೆಚ್ಚುವರಿ ಹೆಚ್ಚು ಕಡಿಮೆ ಜನಸಂಖ್ಯಾ ಹೆಚ್ಚುವರಿ ಪ್ರಮಾಣದಷ್ಟೆ ಆಗಿದ್ದು ತಲಾ ವರಮಾನದಲ್ಲಿ ಆಗಿರುವ ಹೆಚ್ಚುವರಿಗೆ ಕೃಷಿ ಉತ್ಪಾದನೆಯ ಕೊಡುಗೆ ಏನೂ ಇಲ್ಲದಾಗಿದೆ.

	ಕೈಗಾರಿಕಾಭಿವೃದ್ಧಿ: ಕೃಷಿಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಯೋಜನಾರಂಭ ಕಾಲದಲ್ಲಿ ಹತ್ತಿ ಬಟ್ಟೆ, ಸೆಣಬು, ರೇಷ್ಮೆ, ಉಕ್ಕು, ಸಕ್ಕರೆ, ಸಿಮೆಂಟ್, ಕಾಗದ, ಬೆಂಕಿಕಡ್ಡಿ, ಸಾಬೂನು, ವನಸ್ಪತಿ, ಕೆಲವು ಎಂಜನಿಯರಿಂಗ್ ಉಪಕರಣಗಳು ಇತ್ಯಾದಿ ಆಧುನಿಕ ಕೈಗಾರಿಕೆಗಳು ಸ್ಧಾಪಿತವಾಗಿದ್ದುವು. ಆದರೆ ಹೀಗೆ ಬೆಳೆದುಬಂದಿದ್ದ ಕೈಗಾರಿಕೆಗಳೆಲ್ಲವೂ ಸೇರಿ ಒಟ್ಟು ಕಾರ್ಮಿಕ ಬಲದ ಶೇಕಡಾ 2ರಷ್ಟು ಮಾತ್ರ ಹೊಂದಿದ್ದವಲ್ಲದೆ ರಾಷ್ಟ್ರೀಯ ವರಮಾನದಲ್ಲಿ ಅವುಗಳ ಉತ್ಪನ್ನ ಮೌಲ್ಯದ ಭಾಗ ಶೇಕಡಾ 7ರಷ್ಟು ಮಾತ್ರ. ಭಾರತದ ಕೈಗಾರಿಕೋದ್ಯಮ ಅನಭಿವೃದ್ಧಿ ಸ್ಥಿತಿಯಲ್ಲಿದ್ದುದನ್ನು ಇವು ಸೂಚಿಸುವುವು. ದೇಶದ ಪ್ರಕೃತಿದತ್ತ ಖನಿಜ ಹಾಗೂ ಕೃಷಿ ಕಚ್ಚಾ ಸರಕುಗಳ ವೈವಿಧ್ಯ, ಚಾಲಕಶಕ್ತಿ ಉತ್ಪಾದನೆಗೆ ಇರುವ ಸಾಮಥ್ರ್ಯ ಹೊಸ ತಂತ್ರವಿದ್ಯೆ ಮತ್ತು ಕುಶಲವಿದ್ಯೆಗಳನ್ನು ಕಲಿಯಲು ಜನತೆಗಿರುವ ಆಭಿರುಚಿ ಮತ್ತು ಭಾರತದ ಕೈಗಾರಿಕೋತ್ಪನ್ನಗಳಿಗೆ ದೇಶವಿದೇಶಗಳಲ್ಲಿ ಇರುವ ಬೇಡಿಕೆ ಇತ್ಯಾದಿ ಅಂಶಗಳು ಭಾರತದ ಕೈಗಾರಿಕಾಭಿವ್ರದ್ಧಿಗೆ ನೆರವಾದುವು.

	ಭಾರತದ ಕೈಗಾರಿಕಾಭಿವೃದ್ಧಿಯಲ್ಲಿ ಪಾಲ್ಗೊಂಡಿರುವ ಸರ್ಕಾರಿ ಹಾಗೂ ಖಾಸಗಿ ವಲಯಗಳ ಪಾತ್ರ ಕೈಗಾರಿಕಾ ನೀತಿ ನಿರೂಪಣೆಯಲ್ಲಿ ಸೂಚಿಸಲ್ಪಟ್ಟಿದೆ. 1956ರ ಕೈಗಾರಿಕಾನೀತಿಯಂತೆ ಸುಮಾರು 17 ಮುಖ್ಯಮೂಲ ಕೈಗಾರಿಕೆಗಳನ್ನು ಸರ್ಕಾರಿ ವಲಯದಲ್ಲೂ ಸುಮಾರು 12 ಕೈಗಾರಿಕೆಗಳನ್ನು ಖಾಸಗಿವಲಯದಲ್ಲೂ ಸೇರಿಸಲಾಗಿದೆ. ಹೊಸ ಘಟಕಗಳ ಸ್ಧಾಪನೆ ಸಾಮಾನ್ಯವಾಗಿ ಸರ್ಕಾರಕ್ಕೆ ಸೇರಿದ ವಿಷಯವಾದರೂ ಅವುಗಳ ಅಭಿವೃದ್ಧಿಯಲ್ಲಿ ಖಾಸಗಿವಲಯಕ್ಕೂ ಪಾತ್ರ ವಹಿಸುವ ಅವಕಾಶವಿದೆ. ಹೀಗೆ ನಮೂದಿತವಾಗಿಲ್ಲದೆ ಕೈಗಾರಿಕೆಗಳ ಬೆಳೆವಣಿಗೆ ಸಾಮಾನ್ಯವಾಗಿ ಖಾಸಗಿ ಉದ್ಯಮಿಗಳಿಗೆ ಸೇರಿದ ವಿಷಯವಾಗಿದ್ದರೂ ಸರ್ಕಾರಕ್ಕೂ ಆ ಕೈಗಾರಿಕೆಗಳನ್ನು ಸ್ಧಾಪಿಸಲು ಅವಕಾಶ ಮಾಡಿಕೊಡಲಾಗಿದೆ. ಹೀಗೆ ಕೈಗಾರಿಕಾ ನೀತಿ ಕೈಗಾರಿಕಾಭಿವೃದ್ಧಿಯಲ್ಲಿ ಸರ್ಕಾರಕ್ಕೆ ಹಿಂದೆ ಎಂದೂ ಇರದಿದ್ದಷ್ಟು ಪ್ರಮುಖ ಪಾತ್ರ ನೀಡಿದೆ. ಆದರೂ ಖಾಸಗಿ ವಲಯಕ್ಕೆ ಗಮನಾರ್ಹ ಅವಕಾಶವನ್ನು ಒದಗಿಸಿದೆ. ಇವೆರಡು ವಲಯಗಳು ಕೂಡು ಪ್ರಯತ್ನದಿಂದ ಭಾರತದ ಕೈಗಾರಿಕಾಭಿವೃದ್ಧಿ ಯೋಜಕ ಮಾರ್ಗದಲ್ಲಿ ಮುಂದುವರಿದಿದೆಯೆನ್ನಬಹುದು.

	ಎರಡನೆಯ ಪಂಚವಾರ್ಷಿಕ ಯೋಜನೆಯಲ್ಲಿ ಬೃಹತ್ ಕೈಗಾರಿಕೆಗಳ ಹಾಗೂ ಅನುಭೋಗಿ ಸರಕುಗಳನ್ನು ತಯಾರಿಸುವ ಕೈಗಾರಿಕೆಗಳ ನಿರ್ಮಾಣಕ್ಕೂ ಬಂಡವಾಳದ ಅಭಿವೃದ್ಧಿಗೂ ವಿಶಿಷ್ಟ ಸ್ಧಾನ ಕೊಡಲಾಗಿದೆ. ಆದರೆ ಸಣ್ಣ ಹಾಗೂ ಗೃಹ ಕೈಗಾರಿಕೆಗಳನ್ನು ಈ ಯೋಜನೆಯಲ್ಲಿ ಪೂರ್ಣವಾಗಿ ನಿರ್ಲಕ್ಷಿಸಲಾಗಿಲ್ಲ.

	ಸರ್ಕಾರಿ ವಲಯದಲ್ಲಿ 1951-79 ಅವಧಿಯಲ್ಲಿ ಕೈಗಾರಿಕಾಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಮಾಡಲಾದ ಯೋಜನಾವೆಚ್ಚ ಒಟ್ಟು ರೂ 18,103 ಕೋಟಿ. ಇದರಲ್ಲಿ ಸಣ್ಣ ಹಾಗೂ ಗ್ರಾಮೀಣ ಕೈಗಾರಿಕೆ ಅಭಿವೃದ್ಧಿಗೆ ರೂ 1363 ಕೋಟಿ, ಬೃಹತ್ ಕೈಗಾರಿಕೆ ಹಾಗೂ ಗಣಿ ಅಭಿವೃದ್ಧಿಗೆ ರೂ 13,740 ಕೋಟಿ ವೆಚ್ಚವಾಗಿವೆ. ಹೀಗೆ ಕೈಗೊಳ್ಳಲಾಗಿರುವ ಕೈಗಾರಿಕಾಭಿವೃದ್ಧಿ ಯೋಜನಾವೆಚ್ಚದಲ್ಲಿ ಕೇಂದ್ರಸರ್ಕಾರದ ಪಾಲೇ ಹೆಚ್ಚು. ರಾಜ್ಯಸರ್ಕಾರಗಳ ಭಾಗ ಈ ಒಟ್ಟು ಕೈಗಾರಿಕಾ ವೆಚ್ಚದ ಸುಮಾರು ಶೇಕಡಾ 9ರಷ್ಟು ಮಾತ್ರ. ಅದೇ ಅವಧಿಯಲ್ಲಿ ಖಾಸಗಿ ವಲಯದ ಕೈಗಾರಿಕಾಭಿವೃದ್ಧಿಗಾಗಿ ಹಾಕಿದ ಮೊತ್ತ ರೂ 11,868 ಕೋಟಿ. 1978-83ರ ಕರಡು ಯೋಜನೆಯ ಪ್ರಕಾರ ಈ ಅವಧಿಯಲ್ಲಿ ಕೈಗಾರಿಕೆ ಹಾಗೂ ಗಣಿ ಅಭಿವೃದ್ಧಿಗೆ ಸರ್ಕಾರಿ ವಲಯದಲ್ಲಿ 18038 ಕೋಟಿ ವೆಚ್ಚದ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿತ್ತು.

	ಯೋಜನೆ ಆರಂಭವಾದಾಗಿನ ಕೈಗಾರಿಕಾಪರಿಸ್ಥಿತಿಯೊಡನೆ ಹೋಲಿಸಿದರೆ ಇಂದು ಭಾರತದ ಕೈಗಾರಿಕೆಗಳು ಗಮನಾರ್ಹವಾಗಿ ಮುಂದುವರಿದಿವೆ. ಲೋಹ, ರಾಸಾಯನಿಕ, ಯಂತ್ರ ಹಾಗೂ ಯಂತ್ರೋಪಕರಣ, ವಿದ್ಯುಚ್ಛಕ್ತಿ ಉಪಕರಣ, ರೇಲ್ವೆ ಎಂಜಿನ್ ಹಾಗೂ ಬೋಗಿ, ಹಡಗು, ವಿಮಾನ, ಮೋಟರ್ ಮತ್ತು ಟ್ರಕ್, ಮೋಟರ್ ಸೈಕಲ್ ಹಾಗೂ ಸ್ಕೂಟರ್, ಹೊಲಿಗೆ ಯಂತ್ರ, ಗಡಿಯಾರ, ವೈಜ್ಞಾನಿಕ ಉಪಕರಣ, ಔಷಧ, ಪೆಟ್ರೋಲಿಯಮ್ ಉತ್ಪನ್ನ, ರೇಯಾನ್, ನೈಲಾನ್, ಕೃತಕ ರೇಷ್ಮೆ ಇತ್ಯಾದಿಯಾಗಿ ನೂರಾರು ವಿಧದ ಕೈಗಾರಿಕೆಗಳ ಸ್ಧಾಪನೆ ಮತ್ತು ವಿಸ್ತರಣೆಗಳು ಯೋಜನಾಯುಗದ ಕೈಗಾರಿಕಾಭಿವೃದ್ಧಿಯ ಸಾಧನೆಗಳು.

	ಮೂಲ ಹಾಗೂ ಸ್ಧೂಲ ಕೈಗಾರಿಕೆಗಳ ಬೆಳೆವಣಿಗೆ ಕೈಗಾರಿಕಾವಿಸ್ತರಣೆಗೆ ತಳಹದಿ. ಇದು ಅಭಿವೃದ್ಧಿಗೆ ಬೇಕಾದ ಬಂಡವಾಳ ಸರಕುಗಳ ಬಗ್ಗೆಯೂ ಆಧುನಿಕ ತಂತ್ರವಿದ್ಯೆಯ ಬಗ್ಗೆಯೂ ಸ್ವಾವಲಂಬನೆಯನ್ನು ಹೆಚ್ಚಿಸಿದ ಮತ್ತು ದೇಶದ ರಕ್ಷಣಾ ಸಾಮಥ್ರ್ಯವನ್ನು ವೃದ್ಧಿಗೊಳಿಸಿದೆ. ವಸ್ತ್ರೋದ್ಯಮ (ಟಿಕ್ಸ್‍ಸ್ಟೈಲ್) ಯಂತ್ರ, ಸಕ್ಕರೆ ಕಾರ್ಖಾನೆಯಂತ್ರ, ಕಬ್ಬಿಣ ಹಾಗೂ ಉಕ್ಕು, ಅಲ್ಯೂಮಿನಿಯಮ್, ಕೃತಕನೂಲು, ಕಾಸ್ಟಿಕ್ ಸೋಡಾ, ಅಮೊನಿಯಮ್ ಸಲ್ಪೇಟ್, ನ್ಯೂಸ್‍ಪ್ರಿಂಟ್ ಕಾಗದ ಈ ಬಗೆಯ ಸರಕುಗಳ ಒಟ್ಟು ಸರಬರಾಜಿನಲ್ಲಿ 1950-51ರಲ್ಲಿ ಆಮದು ಭಾಗ ಗಣನೀಯವಾಗಿದ್ದುದು 1976-77ರ ವೇಳೆಗೆ ಅತ್ಯಲ್ಪ ಭಾಗ ಮಾತ್ರವಾಗಿದ್ದಿತು. ಅಂದಮೇಲೆ ಕೈಗಾರಿಕಾ ಉತ್ಪನ್ನಗಳಿಗೆ ದೇಶದ ಆಮದು ಅವಲಂಬನೆ ಕಡಿಮೆಯಾಗಿತ್ತೆಂಬುದು ವ್ಯಕ್ತವಾಗುವುದು. ಕೈಗಾರಿಕಾವೃದ್ಧಿಯಿಂದ ದೇಶದ ರಫ್ತುಗಳಲ್ಲಿ 1960ರ ದಶಕದ ಮಧ್ಯಭಾಗದಿಂದ ಈಚೆಗೆ ಹೆಚ್ಚು ವೈವಿಧ್ಯವುಂಟಾಗಲಾರಂಭಿಸಿದ. ಇತ್ತ ಕಾರ್ಮಿಕ ಬಲಕ್ಕೆ ಉದ್ಯೋಗಾವಕಾಶ ಹೆಚ್ಚಿರುವುದು ಅಧಿಕಲಾಭ. ವ್ಯವಸ್ಥಿತ ಕೈಗಾರಿಕೋದ್ಯಮಗಳಲ್ಲಿ ಇದ್ದ ಉದ್ಯೋಗಿಗಳ ಒಟ್ಟು ಸಂಖ್ಯೆ 1961ರಲ್ಲಿ 34 ಲಕ್ಷ ಇದ್ದುದು 1977ರಲ್ಲಿ 54 ಲಕ್ಷಕ್ಕೆ ಏರಿತ್ತು. ರಾಷ್ಟ್ರೀಯ ವರಮಾನದಲ್ಲಿ ಕೈಗಾರಿಕೋತ್ಪನ್ನಗಳ ಭಾಗವೂ ಗಣನೀಯವಾಗಿ ಹೆಚ್ಚಿದೆ. 1951ರಲ್ಲಿ ಈ ಭಾಗ ಶೇಕಡಾ 7ರಷ್ಟು ಮಾತ್ರವಿದ್ದುದು 1976-77ರಲ್ಲಿ ಶೇಕಡಾ 22ಕ್ಕೂ ಹೆಚ್ಚಾಗಿತ್ತು.

	ಕೈಗಾರಿಕಾಯೋಜನೆಗಳನ್ನು ರೂಪಿಸುವುದರಲ್ಲಿಯೂ ಅನುಷ್ಠಾನಕ್ಕೆ ತರುವುದರಲ್ಲಿಯೂ ಕೆಲವು ಮುಖ್ಯ ಲೋಪದೋಷಗಳಿದ್ದುದು ಕಂಡುಬಂದಿದೆ. ಮೂಲ ಹಾಗೂ ಸ್ಥೂಲ ಕೈಗಾರಿಕೆಗಳ ಅಭಿವೃದ್ಧಿಗೆ ನೀಡಲಾದ ಪ್ರಾಮುಖ್ಯದ ಜೊತೆಗೆ ಇತರ ಕೆಲವು ಮುಖ್ಯ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ಲೋಪವಿತ್ತು. ಈ ಲೋಪದಿಂದ ಹಣಬಾಹುಳ್ಯ ಪರಿಸ್ಥಿತಿ ಉಲ್ಬಣಗೊಂಡಿತು ಮತ್ತು ಕೈಗಾರಿಕಾ ಉತ್ಪಾದನಾ ಸಾಮಥ್ರ್ಯದ ಗಮನಾರ್ಹ ಭಾಗ ನಿರುಪಯೋಗವಾಗಿ ಉಳಿಯುವಂತಾಯಿತು. ಅಲ್ಲದೆ, ಅನುಭೋಗಿ ವಿವಿಧ ಪರದೇಶಗಳ ಸಮಾನ ಅಭಿವೃದ್ಧಿಗೂ ಸಲ್ಲಬೇಕಾದ ಪ್ರಾಮುಖ್ಯವನ್ನು ಯೋಜನೆಗಳು ನೀಡಲಿಲ್ಲವಾದ್ದರಿಂದ ಉಳಿಯುವಂತಾಯಿತು. ಅಲ್ಲದೆ, ಅನುಭೋಗಿ ಸರಕುಗಳ ಉತ್ಪಾದನೆಗೂ ಗ್ರಾಮೀಣ ಕೈಗಾರಿಕೆಗಳ ಅಭಿವೃದ್ಧಿಗೂ ವಿವಿಧ ಪ್ರದೇಶಗಳ ಸಮಾನ ಅಭಿವೃದ್ಧಿಗೂ ಸಲ್ಲಬೇಕಾದ ಪ್ರಾಮುಖ್ಯವನ್ನು ಯೋಜನೆಗಳು ನೀಡಲಿಲ್ಲವಾದ್ದರಿಂದ ಬೆಳೆದುಬಂದಿರುವ ಕೈಗಾರಿಕಾ ಉದ್ಯಮಗಳ ರಚನೆಯಲ್ಲಿ ಸಮತೋಲನವಿದೆ ಎಂದು ಹೇಳಲಾಗುವುದಿಲ್ಲ. ಪರವಾನಿಗೆ ಪದ್ಧತಿ, ಬಂಡವಾಳ ಹೂಡಿಕೆ ನಿಯಂತ್ರಣ. ಬೆಲೆ ನಿಯಂತ್ರಣ, ವಿದೇಶೀ ವಿನಿಮಯ ಹಾಗೂ ಕಚ್ಚಾ ಸರಕುಗಳ ವಿತರಣೆ ಇತ್ಯಾದಿಗಳ ಅನುಷ್ಠಾನದಲ್ಲಿ ನಿರೀಕ್ಷಿತ ಅಭಿವೃದ್ಧಿ ಮಟ್ಟ ತಲುಪಲಾಗಲಿಲ್ಲ. ಸಾರ್ವಜನಿಕ ವಲಯದಲ್ಲಿ ಹೆಚ್ಚು ಬಂಡವಾಳ ಹಾಕಿ ಸ್ಧಾಪಿಸಲಾದ ಅನೇಕ ಬೃಹತ್ ಕೈಗಾರಿಕಾ ಸಂಸ್ಧೆಗಳಲ್ಲಿ ಹಾಕಿದ ಬಂಡವಾಳಕ್ಕೆ ತಕ್ಕಂತೆ ಪ್ರತಿಫಲಕೊಡಲಿಲ್ಲವಾದ್ದರಿಂದ ಮುಂದಿನ ಕೈಗಾರಿಕಾಭಿವೃದ್ಧಿಗೆ ಈ ಮೂಲದಿಂದ ಸಹಜವಾಗಿ ಒದಗಬೇಕಾಗಿದ್ದ ಬಂಡವಾಳ ಒದಗಿದೆ ಕೈಗಾರಿಕಾಭಿವೃದ್ಧಿಗೆ ತೊಡಕಾಯಿತು. ಕೈಗಾರಿಕೆಗೆ ಬೆಂಬಲವಾಗಿ ಮುಂದುವರಿಯಬೇಕಾದ ಕೃಷಿ, ವಿದ್ಯುತ್ ಇತ್ಯಾದಿ ವಲಯಗಳು ಸರಿಸಮವಾಗಿ ಬೆಳೆಯದಿದ್ದುದರಿಂದಲೂ ಭಾರತದ ಕೈಗಾರಿಕಾ ಮುನ್ನಡೆ ಸ್ವಲ್ಪಮಟ್ಟಿಗೆ ಕುಂಠಿತವಾಯಿತು.

	ವಿದ್ಯುತ್: ಆಧುನಿಕ ಉತ್ಪಾದನಾ ವ್ಯವಸ್ಥೆಗೆ ಹಾಗೂ ಆಧುನಿಕ ನಾಗರಿಕ ಜೀವನಕ್ಕೆ ವಿದ್ಯುತ್ ಮೂಲಭೂತವಾದದ್ದು. ಭಾರತದ ಯೋಜನೆಗಳಲ್ಲಿ ಚಾಲಕಶಕ್ತಿ ಅಭಿವೃದ್ಧಿಗೆ ಮೊದಲಿನಿಂದಲೂ ಪ್ರಾಮುಖ್ಯ ನೀಡಲಾಗಿದೆ. 1951-79 ಅವಧಿಯಲ್ಲಿ ವಿದ್ಯುತ್ ಉತ್ಪಾದನೆಗಾಗಿ ಮಾಡಲಾದ ವೆಚ್ಚ ಒಟ್ಟು ರೂ 13,288 ಕೋಟಿ-ಅಂದರೆ ಸಾರ್ವಜನಿಕ ವಲಯದ ಒಟ್ಟು ಯೋಜನಾ ವೆಚ್ಚದ ಶೇಕಡಾ 17ರಷ್ಟು. ಹೀಗೆ ಕೈಗೊಂಡ ಕಾರ್ಯಕ್ರಮಗಳಿಂದ 1951ರಲ್ಲಿ ಕೇವಲ 590 ಕೋಟಿ ಕೆವಿ ಇದ್ದುದು 1975ರ ವೇಳೆಗೆ 6,930 ಕೋಟಿ ಕೆವಿ ಉತ್ಪಾದನೆಗೆ ಏರಿತು. ಗೃಹಬಳಕೆ, ಕೈಗಾರಿಕೆ ಮತ್ತು ಕೃಷಿ, ಸಾರಿಗೆ, ಸಾರ್ವಜನಿಕ ಬೀದಿ ದೀಪಗಳಿಗೆ ಇತ್ಯಾದಿ-ಬಳಸಿದ ವಾರ್ಷಿಕ ತಲಾವಿದ್ಯುತ್ ಪ್ರಮಾಣ 1950ರಲ್ಲಿ 23 ಕೆವಿ ಇದ್ದುದು 1973ರ ವೇಳೆಗೆ 96 ಕೆವಿ ಆಗಿತ್ತು.

	ವಿದ್ಯುದುತ್ಪಾದನೆಗೆ ವಾಸ್ತವವಾಗಿ ವೆಚ್ಚ ಪಂಚವಾರ್ಷಿಕ ಯೋಜನೆಗಳಲ್ಲಿ ನಿಗದಿ ಮಾಡಿದುದಕ್ಕೂ ಹೆಚ್ಚಾಗಿದ್ದಿತಾದರೂ ವಿದ್ಯುದುತ್ಪಾದನೆ ಮಾತ್ರ ಯೋಜಿತ ಗುರಿಗಿಂತ ಕಡಿಮೆಯಾಗಿದ್ದು ದೇಶದಲ್ಲಿ ವಿದ್ಯುತ್ ಕೊರತೆ ಎದ್ದು ಕಾಣುವಂತಾಯಿತು. ವಿದ್ಯುತ್ ಬಳಕೆಯ ಮೇಲೆ ಆಗಿಂದಾಗ್ಗೆ ನಿರ್ಬಂಧಗಳನ್ನು ಹಾಕಬೇಕಾದ ಪರಿಸ್ಥಿತಿ ಬಂತು. ವಿದ್ಯುತ್ತಿನ ಕೊರತೆಯಿಂದಾಗಿ ಕೈಗಾರಿಕಾ ಸಾಮಥ್ರ್ಯದ ಪೂರ್ಣ ಉಪಯೋಗವನ್ನು ಪಡೆಯಲಾಗಲಿಲ್ಲ. ಗ್ರಾಮಾಂತರ ಪ್ರದೇಶಗಳಿಗೆ ವಿದ್ಯುತ್ ಸೌಕರ್ಯ ವಿಸ್ತರಣ ಕಾರ್ಯಕ್ರಮ ಯೋಜನೆಯ ಒಂದು ಮುಖ್ಯ ಅಂಗ. ನೀರಾವರಿ ಮತ್ತು ಕೆಲವು ಕೃಷಿ ಕಾರ್ಯಾಚರಣೆಗಳು. ಗ್ರಾಮೀಣ ಗೃಹಕೈಗಾರಿಕೆ ಮತ್ತು ಇತರ ಸಣ್ಣ ಕೈಗಾರಿಕೆಗಳಿಗೆ ವಿದ್ಯುತ್ ಒದಗಿಸುವುದೂ ಯೋಜನೆಯ ಮುಖ್ಯ ಉದ್ದೇಶ. ಪಟ್ಟಣ ಮತ್ತು ಹಳ್ಳಿಜೀವನಕ್ಕೆ ಸಮಾನ ನಾಗರಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವೂ ಈ ಕಾರ್ಯಕ್ರಮದಲ್ಲಿ ಅಡಗಿದೆ. ಗ್ರಾಮೀಣ ವಿದ್ಯುತ್ ಪ್ರಸರಣಕ್ಕೆ 1951-79 ಯೋಜನಾವಧಿಯಲ್ಲಿ ಒಟ್ಟು ರೂ 572 ಕೋಟಿ ವೆಚ್ಚ ಮಾಡಲಾಗಿದೆ. ಇದೇ ಅವಧಿಯಲ್ಲಿ ದೇಶದ ಸುಮಾರು ಒಂದೂವರೆ ಲಕ್ಷ ಗ್ರಾಮಗಳಿಗೆ, ಅಂದರೆ ಒಟ್ಟು ಗ್ರಾಮಗಳ ಸಂಖ್ಯೆಯ ಶೇಕಡಾ 30ರಷ್ಟು ಗ್ರಾಮಗಳಿಗೆ, ವಿದ್ಯುತ್ ಸೌಕರ್ಯ ಒದಗಿಸಿದಂತಾಗಿದೆ. 24 ಲಕ್ಷಕ್ಕೂ ಹೆಚ್ಚು ನೀರಾವರಿ ಪಂಪುಗಳಿಗೆ ವಿದ್ಯುತ್ ಒದಗಿಸಲಾಗಿದೆ. ಬಹುಮಂದಿ ಗ್ರಾಮೀಣ ಜನತೆಗೆ ವಿದ್ಯುದ್ದೀಪ ಮತ್ತು ರೇಡಿಯೊ ಇತ್ಯಾದಿ ನಾಗರಿಕ ಜೀವನ ಸೌಲಭ್ಯಗಳನ್ನು ದೊರಕಿಸಿರುವುದೂ ಗ್ರಾಮೀಣ ಕೈಗಾರಿಕೆಗಳಿಗೆ ವಿದ್ಯುತ್ ಒದಗಿಸಿರುವುದೂ ಗಮನಾರ್ಹ ಪ್ರಗತಿ. ಆದರೆ ಒಟ್ಟಿನಲ್ಲಿ ದೇಶದ ಇನ್ನೂ ಶೇಕಡಾ 70ರಷ್ಟು ಗ್ರಾಮಗಳಿಗೆ ವಿದ್ಯುತ್ ಒದಗಿಸುವ ಕಾರ್ಯ ಪೂರೈಸಬೇಕಾಗಿದೆ. ಗ್ರಾಮೀಣ ವಿದ್ಯುತ್ ಪ್ರಸಾರಣ ಕಾರ್ಯದಲ್ಲಿ ವಿವಿಧ ರಾಜ್ಯಗಳಲ್ಲಿ ತುಂಬ ಅಂತರವಿರುವುದು ಈ ಬಗ್ಗೆ ನಡೆಸಿರುವ ಅಭಿವೃದ್ಧಿಯ ಲಕ್ಷಣದ ಒಂದು ದೋಷವನ್ನು ತೋರಿಸುತ್ತದೆ. 1973-74ರ ವೇಳೆಗೆ ಹರಿಯಾಣದಲ್ಲಿ ಶೇಕಡಾ 100ರಷ್ಟು ಗ್ರಾಮಗಳಿಗೂ ಬಿಹಾರ ಹಾಗೂ ಮಧ್ಯ ಪ್ರದೇಶದಲ್ಲಿ ಶೇಕಡಾ 14-15ರಷ್ಟು ಗ್ರಾಮಗಳಿಗೂ ವಿದ್ಯುತ್ ಒದಗಿಸಲಾಗಿತ್ತು. ಮುಂಬರುವ ಯೋಜನೆಗಳಲ್ಲಿ ದೇಶದ ಎಲ್ಲ ಗ್ರಾಮಗಳಿಗೂ ವಿದ್ಯುತ್ ಒದಗಿಸಿ ಈ ಮುಖ್ಯ ದೋಷವನ್ನು ನಿವಾರಿಸುವ ಕಾರ್ಯ ನಡೆಯಬೇಕಾಗಿದೆ.

	ಸಾರಿಗೆ ಸಂಪರ್ಕ ಅಭಿವೃದ್ಧಿ: ವಿಸ್ತಾರವಾದ ಮತ್ತು ಹೆಚ್ಚು ಜನಸಾಂದ್ರ ದೇಶವಾದ ಭಾರತದ ಎಲ್ಲ ಗ್ರಾಮ ಪಟ್ಟಣಗಳಿಗೆ ಸಾರಿಗೆ ಸಂಪರ್ಕ ಬೆಳೆಸುವುದು ಭಾರತದ ಅಭಿವೃದ್ಧಿ ಪ್ರಯತ್ನದ ಇನ್ನೊಂದು ಮುಖ್ಯ ಭಾಗ. ಕೈಗಾರಿಕಾಭಿವೃದ್ಧಿಯಾಗಲಿ ಕೃಷಿ ಅಭಿವೃದ್ಧಿಯಾಗಲಿ ಆಧುನಿಕ ಸಾರಿಗೆ ಮತ್ತು ಸಂಪರ್ಕಗಳ ಸಹಾಯವಿಲ್ಲದೆ ಮುಂದುವರಿಯಲಾರವು. ಭಾರತದ ಯೋಜನೆಗಳು ರಸ್ತೆ, ರೈಲು, ಹಡಗು ಮತ್ತು ವಿಮಾನ ಸಾರಿಗೆಗಳ ಅಭಿವೃದ್ಧಿ ಬಗ್ಗೆ ಮತ್ತು ವಿವಿಧ ರೂಪದ ಸಂಪರ್ಕ ಮಾಧ್ಯಮಗಳ ಬಗ್ಗೆ ಪೂರ್ವಾಲೋಚಿತ ಗುರಿ ಹಾಗೂ ಅನುಗುಣವಾದ ಕಾರ್ಯಕ್ರಮ ರೂಪಿಸಿಕೊಂಡು ಇವೆಲ್ಲದರಲ್ಲಿಯೂ ಗಮನಾರ್ಹ ಪ್ರಗತಿ ಸಾಧಿಸಿವೆ.

	1951-79 ಅವಧಿಯಲ್ಲಿ ಯೋಜಿತ ಸಾರಿಗೆ ಅಭಿವೃದ್ಧಿಗಾಗಿ ರೂ 12,860 ಕೋಟಿ, ಸಂಪರ್ಕ ಮಾಧ್ಯಮಗಳ ಅಭಿವೃದ್ಧಿಗೆ ರೂ 2268 ಕೋಟಿ ವೆಚ್ಚ ಮಾಡಲಾಯಿತು. ಒಟ್ಟು ಸಾರಿಗೆ ಯೋಜನಾವೆಚ್ಚದಲ್ಲಿ 50ರಷ್ಟು (ರೂ 6575 ಕೋಟಿ) ರೇಲ್ವೆ ಅಭಿವೃದ್ಧಿಗಾಗಿ ಶೇಕಡಾ ಸುಮಾರು 30ರಷ್ಷು ರಸ್ತೆ ಸಾರಿಗೆಗೂ ಮಿಕ್ಕದ್ದು ಇತರ ಸಾರಿಗೆ ಕಾರ್ಯಕ್ರಮಗಳಿಗೂ ಕಾರ್ಯಕ್ರಮಗಳಿಗೂ ವೆಚ್ಚವಾಗಿದೆ. ಯೋಜನಾಯುಗದ ಪ್ರಥಮ ಎರಡು ದಶಕಗಳಲ್ಲಿ 5430 ಕಿಲೊಮೀಟರುಗಳಷ್ಟು ಹೊಸ ರೇಲ್ವೆ ಮಾರ್ಗ ನಿರ್ಮಾಣವಾಯಿತು. ಇದೇ ಅವಧಿಯಲ್ಲಿ 2600 ಹೆಚ್ಚು ರೇಲ್ವೆ ಎಂಜಿನ್ನುಗಳನ್ನೂ 11,900 ಹೆಚ್ಚು ಬೋಗಿಗಳನ್ನೂ 1,71,000 ಹೆಚ್ಚು ಗೂಡ್ಸ್‍ವ್ಯಾನುಗಳನ್ನೂ ಉಪಯೋಗಕ್ಕೆ ಸೇರಿಸಲಾಯಿತು. ಇವುಗಳಿಗೆ ಸಂಬಂಧಿಸಿದಂತೆ ಕಟ್ಟಡ ಮತ್ತು ಕಾರ್ಯಾಗಾರಗಳು ನಿರ್ಮಿತವಾದುವು. ಬಾಡ್‍ಗೇಜ್ ರೇಲ್ವೆ ಮಾರ್ಗ ವಿಸ್ತರಣೆ, ಡೀಸಲ್ ಮತ್ತು ವಿದ್ಯುತ್ ರೈಲುಗಳ ಬಳಕೆ ಮತ್ತು ರೈಲು ಸಂಚಾರ ನಿಯಂತ್ರಣವನ್ನು ಹೆಚ್ಚು ಆಧುನಿಕಗೊಳಿಸುವಿಕೆ ಇತ್ಯಾದಿಗಳೆಲ್ಲವೂ ರೇಲ್ವೆ ಅಭಿವೃದ್ಧಿಯೋಜನೆಯಲ್ಲಿ ಸೇರಿವೆ. ಆದರೆ ಸಾಮಾನು ಸಾಗಾಣೆಗೂ ಜನರ ಪ್ರಯಾಣಕ್ಕೂ ಹೆಚ್ಚುವರಿ ಬೇಡಿಕೆಯುಂಟಾಗಿ ಹೆಚ್ಚಿಸಲಾದ ರೈಲುಗಳೂ ಸಾಕಾಗದೆ ಇರುವ ಸಾಧನೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಯಿತು. ಯೋಜನಾಯುಗದಲ್ಲಿ ವರ್ಷಕ್ಕೆ ಸರಾಸರಿ 259 ಕಿಲೊಮೀಟರಿನಷ್ಟು ಹೊಸಮಾರ್ಗ ನಿರ್ಮಾಣವಾದುದು ಅಲ್ಪ ಸಾಧನೆಯೆಂದೇ ಹೇಳಬಹುದು.

	ರೇಲ್ವೆ ಅಭಿವೃದ್ಧಿ ಕೇಂದ್ರ ಸರ್ಕಾರದ ಹೊಣೆ ಮತ್ತು ಕರ್ತವ್ಯ. ರಸ್ತೆ ಸಾರಿಗೆ ಅಭಿವೃದ್ಧಿಯಲ್ಲಿ ಕೇಂದ್ರ ಸರ್ಕಾರಗಳ ಹಾಗೂ ಖಾಸಗಿ ವಲಯದ ಪಾತ್ರಗಳು ಮಿಳಿತವಾಗಿವೆ. ರಾಷ್ಟ್ರೀಯ ಹೆದ್ದಾರಿಗಳು ಕೇಂದ್ರ ಸರ್ಕಾರದ ಪಾಲಿಗೂ ಉಳಿದವು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಧೆಗಳ ಪಾಲಿಗೂ ಸೇರಿವೆ. ರಸ್ತೆ ಸಾರಿಗೆಯಲ್ಲಿ ಭಾಗಶ: ರಾಷ್ಟ್ರೀಕರಣ ನೀತಿ ಅನ್ವಯವಾಗಿ ಈಗ ಎಲ್ಲ ರಾಜ್ಯಗಳನ್ನೂ ಒಟ್ಟು ಸೇರಿಸಿದರೆ ಶೇಕಡಾ ಸುಮಾರು 25-30ರಷ್ಟು ರಸ್ತೆಸಾರಿಗೆಯನ್ನು ರಾಜ್ಯಸರ್ಕಾರಗಳು ತಮ್ಮ ರಸ್ತೆ ಸಾರಿಗೆ ನಿಗಮಗಳು ಮೂಲಕ ನಡೆಸುತ್ತಿವೆ. ಉಳಿದ ಭಾಗ ಬಸ್ಸು ಮತ್ತು ಸಾಮಾನು ಸಾಗಣೆಯ ಲಾರಿ ಸೇವೆಗಳೆಲ್ಲವೂ ಖಾಸಗಿಯವರ ವಶದಲ್ಲಿವೆ. ಹೀಗೆ ರಸ್ತೆ ಸಾರಿಗೆ ಅಭಿವೃದ್ಧಿ ಯೋಜನೆಯ ಮುನ್ನಡೆ ಕೇಂದ್ರ, ರಾಜ್ಯ ಹಾಗೂ ಸ್ಧಳೀಯ ಸರ್ಕಾರಗಳ ಮತ್ತು ಖಾಸಗಿ ಉದ್ಯಮಿಗಳ ರೀತಿನೀತಿಗಳನ್ನೂ ಕಾರ್ಯಕ್ರಮಗಳನ್ನೂ ಅವಲಂಬಿಸಿವೆ.

	ರಸ್ತೆಗಳ ವಿಸ್ತರಣೆಗಾಗಿ 1943ರಲ್ಲಿಯೇ 10 ವರ್ಷಗಳ ಯೋಜನೆಯೊಂದನ್ನು ಆಚರಣೆಗೆ ತರಲಾಗಿತ್ತು. ಅಭಿವೃದ್ಧಿ ಕೃಷಿ ಪ್ರದೇಶದ ಯಾವ ಗ್ರಾಮವೂ ಮುಖ್ಯ ರಸ್ತೆಯಂದರಿಂದ 8ಕಿಮೀ ದೂರವಿರದಂತೆ ಮಾಡುವುದು ಈ ಯೋಜನೆಯ ಒಂದು ಮುಖ್ಯ ಗುರಿಯಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ಯುಕ್ತಮಾರ್ಪಾಡುಗಳೊಡನೆ ಪ್ರಥಮ ಹಾಗೂ ದ್ವಿತೀಯ ಪಂಚವಾರ್ಷಿಕ ಯೋಜನೆಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಯಿತು. 1961-81 ಅವಧಿಯನ್ನು ಒಳಗೊಂಡ ರಸ್ತಯೋಜನೆಯೊಂದನ್ನು 1958ರಲಿ ರೂಪಿಸಿಕೊಂಡು ದೇಶದ ಮೂಲೆಮೂಲೆಯ ಹಳ್ಳಿಗೂ ಸರಿಯಾದ ರಸ್ತೆ ಸೌಕರ್ಯ ಒದಗಿಸುವ ಪ್ರಯತ್ನವನ್ನು ಯೋಜನೆಗಳು ನಡೆಸುತ್ತಿದೆ.

	1951-79ರ ಅವಧಿಯಲ್ಲಿ ಸರ್ಕಾರಿ ವಲಯದಲ್ಲಿ ರಸ್ತೆಗಳಿಗಾಗಿ ರೂ 3259 ಕೋಟಿ ಮತ್ತು ರಸ್ತೆ ಸಾರಿಗೆಗಾಗಿ ರೂ 635 ಕೋಟಡ ಬಂಡವಾಳ ವೆಚ್ಚವನ್ನು ಕೈಗೊಳ್ಳಲಾಯಿತು. ಈ ವೆಚ್ಚದ ಫಲವಾಗಿ ದೇಶದಲ್ಲಿ ಪಕ್ಕಾ ರಸ್ತೆ 1950-51ರಲ್ಲಿ 1,57,000 ಕಿಲೊಮೀಟರುಗಳಿಂದ 1977-78ರಲ್ಲಿ 5,03,000 ಕಿಲೊಮೀಟರುಗಳಿಗೂ ಕಚ್ಚಾ ರಸ್ತೆ ಅದೇ ಅವಧಿಯಲ್ಲಿ 2,43,000 ಕಿಲೊಮೀಟರಿನಿಂದ 8,58,000 ಕಿಲೊಮೀಟರುಗಳಿಗೂ ವಿಸ್ತರಿಸಿತು. ಇಷ್ಟಾದರೂ ಹೆಚ್ಚಿನ ಗ್ರಾಮಾಂತರಪ್ರದೇಶಗಳಿಗೆ ಪಕ್ಕಾ ರಸ್ತೆಗಳ ಸೌಕರ್ಯ ಇನ್ನೂ ಒದಗಿಲ್ಲ.

	ರಸ್ತೆಗಳ ವಿಸ್ತರಣೆಯೊಂದಿಗೇ ರಸ್ತೆ ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತ ಬಂದಿದೆ. ಪ್ರಯಾಣಿಕರ ಪ್ರಯಾಣಕ್ಕಾಗಿ 1950-51 ಮತ್ತು 1971-72 ಅವಧಿಗಳಲ್ಲಿ ಬಸ್ಸುಗಳ ಸಂಖ್ಯೆ 34,400ರಿಂದ 1,00,000ಕ್ಕೂ ಟ್ಯಾಕ್ಸಿಗಳ ಸಂಖ್ಯೆ 11,600ರಿಂದ 66,600ಕ್ಕೂ ಸಾಮಾನುಗಳ ಸಾಗಣೆ ಟ್ರಕ್ಕುಗಳ ಸಂಖ್ಯೆ 81,900ರಿಂದ 3,63,900ಕ್ಕೂ ಹೆಚ್ಚಿತು. ಇದೇ ಅವಧಿಯಲ್ಲಿ ಕಾರುಗಳು ಮತ್ತು ಜೀಪುಗಳ ಸಂಖ್ಯೆ 1,47,700ರಿಂದ 6,71,300ಕ್ಕೂ ಮೋಟರ್ ಸೈಕಲ್ಲುಗಳು ಹಾಗೂ ಆಟೋರಿಕ್ಷಾಗಳ ಸಂಖ್ಯೆ 26,900ರಿಂದ 6,87,100ಕ್ಕೂ ಹೆಚ್ಚಿತು. ರಸ್ತೆ ಸಾರಿಗೆ ಗಮನಾರ್ಹವಾಗಿ ಬೆಳೆದಿರುವುದನ್ನು ಈ ಸಂಖ್ಯೆಗಳು ಸೂಚಿಸುವುವಾದರೂ ಮುಂದುವರಿದಿರುವ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಇನ್ನೂ ಸಾಧಿಸಬೇಕಾದ್ದು ಇದೆ. ರಸ್ತೆ ವಾಹನಗಳ ಸಂಖ್ಯೆ ಹೆಚ್ಚಾದಂತೆ ಇವುಗಳಿಗೆ ಸಂಬಂಧಪಟ್ಟ ಅನೇಕ ಉದ್ಯಮಗಳು ಅಭಿವೃದ್ಧಿಯಾಗುವುದು ಸ್ವಾಭಾವಿಕವೇ ಆಗಿದೆ. ವಿವಿಧ ವಾಹನಗಳ ಮತ್ತು ಬಿಡಿ ಭಾಗಗಳ ತಯಾರಿಕಾ ಘಟಕಗೂ, ಪೆಟ್ರೋಲ್ ಸರಬರಾಜು ವ್ಯವಸ್ಥೆ, ವಾಹನ ಸೇವಾಕೇಂದ್ರಗಳು, ಅವಶ್ಯಕ ಸಿಬ್ಬಂದಿ ಶಿಕ್ಷಣ ಕೇಂದ್ರಗಳು ಇತ್ಯಾದಿಗಳ ಬೆಳೆವಣಿಗೆಯೆಲ್ಲವೂ ರಸ್ತೆ ಸಾರಿಗೆ ಅಭಿವೃದ್ಧಿಯಲ್ಲಿ ಸೇರಿವೆ.

	ವಾಣಿಜ್ಯ, ಪ್ರವಾಸ ಹಾಗೂ ದೇಶದ ರಕ್ಷಣಾ ದೃಷ್ಟಿಯಿಂದ ನೌಕಾಬಲ ಹಾಗೂ ವಾಯುಬಲಗಳ ಅಭಿವೃದ್ಧಿ ಅತ್ಯಾವಶ್ಯಕವಾದವು. ಯೋಜನೆಯನ್ನು ಕೈಗೊಂಡ ಕಾಲದಿಂದಲೂ ಈ ಎರಡು ಶಾಖೆಗಳಲ್ಲಿಯೂ ವಿಶೇಷ ಪ್ರಗತಿಯುಂಟಾಗಿದೆ. ದೇಶದ ಬಂದರಿನಿಂದ ಬಂದರುಗಳಿಗೆ ಒಯ್ಯಲಾಗುವ ಆಂತರಿಕ ವ್ಯಾಪಾರ ಸರಕುಗಳ ಸಾಗಣೆ ಸಂಪೂರ್ಣವಾಗಿ ಭಾರತೀಯ ನೌಕೆಗಳಲ್ಲಿ ನಡೆಯುವಂತೆ ಮಾಡುವುದು ವಿದೇಶಿ ವ್ಯಾಪಾರ ಸಾಗಣೆಯಲ್ಲಿ ಹೆಚ್ಚು ಹೆಚ್ಚಾಗಿ ಭಾರತದ ನೌಕೆಗೆ ಸ್ಥಾನ ದೊರಕಿಸುವುದು ಮತ್ತು ಟ್ಯಾಂಕರ್ ನೌಕಾಘಟಕವೊಂದನ್ನು ನಿರ್ಮಿಸುವುದು ಇವು ನೌಕಾಯೋಜನೆ ಹಾಕಿಕೊಂಡ ಮುಖ್ಯ ಉದ್ದೇಶಗಳು.

	ನೌಕಾಬಲದ ವಿಸ್ತರಣೆ, ಬಂದರುಗಳ ಅಭಿವೃದ್ಧಿ ಮತ್ತು ದೀಪ ಸ್ತಂಭಗಳ ಸ್ಥಾಪನೆ ಇಂಥ ವಿಭಾಗಗಳನ್ನೂಳಗೊಂಡ ನೌಕಾಭಿವೃದ್ಧಿ ಯೋಜನೆಗೆ 1951-79 ಯೋಜನಾವಧಿಯಲ್ಲಿ ರೂ 1740 ಕೋಟಿ ವೆಚ್ಚ ಮಾಡಲಾಗಿದೆ. ಸಾರ್ವಜನಿಕ ವಲಯದ ಈ ಯೋಜನಾವೆಚ್ಚವಷ್ಟೇ ಅಲ್ಲದೆ ನೌಕಾಭಿವೃದ್ಧಿಗೆ ಖಾಸಗಿ ವಲಯದಲ್ಲಿರುವ ನೌಕಾಕಂಪನಿಗಳೂ, ಪೋರ್ಟ್ ಟ್ರಸ್ಟಗಳೂ ಸರ್ಕಾರ ನಿರ್ಮಿಸಿರುವ ನೌಕಾಭಿವೃದ್ಧಿ ಸಮಿತಿಯೂ ಹಣ ಹೂಡಿವೆ. ಹೀಗೆ ಕೈಗೊಂಡ ವೆಚ್ಚಗಳಿಂದ ನೌಕಾವಲಯದ ವಿವಿಧ ಪ್ರಕಾರಗಳಲ್ಲಿಯೂ ಗಣನೀಯ ಪ್ರಗತಿ ಉಂಟಾಗಿದೆ. ನೌಕೆಗಳ ಒಟ್ಟುಬಲ 1950-51ರಲ್ಲಿ ಕೇವಲ 4 ಲಕ್ಷಟನ್ನುಗಳಿಗೂ ಕಡಿಮೆಯಾಗಿದ್ದುದು 1978-79ರ ವೇಳೆಗೆ 62 ಲಕ್ಷ ಟನ್ನುಗಳಷ್ಟು ಹೆಚ್ಚಿದ್ದಿತು. ಕಲ್ಕತ್ತ, ಮದ್ರಾಸ್, ಮುಂಬಾಯಿ, ಕೊಚ್ಚಿನ್ ಮತ್ತು ವಿಶಾಖಪಟ್ಟಣ ಬಂದರುಗಳನ್ನು ವಿಸ್ತರಿಸಿ ಆಧುನೀಕರಿಸುವುದರ ಜೊತೆಗೆ ಕಾಂಡ್ಲಾ, ಮಾರ್ಮಗೋವಾ, ಪರದೀಪ್, ಹೊಸ ಮಂಗಳೂರು ಮತ್ತು ತೂತ್ತುಕೂಡಿ (ಟುಟಿಕಾರಿನ್) ಹೊಸ ಬಂದರುಗಳನ್ನು ಹಿರಿಯ ಬಂದರುಗಳಾಗಿ ಪರಿವರ್ತಿಸಲಾಗಿದೆ ಕೂಡ. ಅನೇಕ ಸಣ್ಣಬಂದರುಗಳಲ್ಲಿಯೂ ಅಭಿವೃದ್ಧಿ ಕಾರ್ಯ ಜರಗುತ್ತಿದೆ. ನೌಕಾ ಸಹಾಯಕ ಸಾಧನಗಳ ನಿರ್ಮಾಣ ಮತ್ತು ನೌಕಾ ಸಿಬ್ಬಂದಿ ತರಬೇತಿ ಇವುಗಳೂ ನೌಕಾಯೋಜನೆಯ ವ್ಯಾಪ್ತಿಗೆ ಸೇರಿವೆ. ಈ ಬಂದರುಗಳು ಮತ್ತು ನೌಕೆಗಳ ಹೆಚ್ಚಿನ ಸಾಮಥ್ರ್ಯದಿಂದಾಗಿ ತೀರಪ್ರದೇಶದ ವ್ಯಾಪಾರ ಸಾಗಣೆ ಬಲುಮಟ್ಟಿಗೆ ಭಾರತೀಯ ನೌಕೆಗಳಿಂದಲೇ ನಡೆಯುತ್ತಿದೆಯಲ್ಲದೆ ದೇಶದ ಹೊರ ವ್ಯಾಪಾರದ ಗಣನೀಯ ಭಾಗವು (1977-78ರಲ್ಲಿ ಒಟ್ಟು ವಿದೇಶಿವ್ಯಾಪಾರದ ಶೇಕಡಾ 35ರಷ್ಟು) ಭಾರತದ ನೌಕೆಗಳ ಸಹಾಯದಿಂದಲೇ ಸಾಗುತ್ತಿವೆ. ವಾಣಿಜ್ಯ ನೌಕಾಬಲ ಹೀಗೆ ಹೆಚ್ಚಿರುವುದು ದೇಶದ ರಕ್ಷಣಾ ಸಾಮಥ್ರ್ಯ ದೃಷ್ಟಿಯಿಂದಲೂ ಮುಖ್ಯವಾಗಿದೆ. ತುರ್ತು ಪರಿಸ್ಧಿತಿ ಒದಗಿದಾಗ ಅವಶ್ಯಬಿದ್ದರೆ ರಕ್ಷಣಾ ನೌಕೆಗೆ ಬೆಂಬಲವಾಗಿ ವಾಣಿಜ್ಯನೌಕೆ ಸಹಾಯಮಾಡಬಲ್ಲವೆಂದು ಹೇಳಬಹುದು.

	ನೌಕೆಯಂತಯೇ ವಾಯುಬಲವೂ ಆಂತರಿಕ ಹಾಗೂ ಅಂತಾರಾಷ್ಟ್ರೀಯ ಸಾರಿಗೆಗಳೆರಡರಲ್ಲಿಯೂ ಮುಖ್ಯಪಾತ್ರ ಹೊಂದಿದೆ. 1950ರಲ್ಲಿ ಸೈನಿಕ ವಿಮಾನ ಸಾರಿಗೆಯನ್ನು ರಾಷ್ಟ್ರೀಕರಿಸಲಾಯಿತು. ಅಂದಿನಿಂದಲೂ ವಿಮಾನ ಸಾರಿಗೆ ಅಭಿವೃದ್ಧಿ ಸರ್ಕಾರಿವಲಯಕ್ಕೆ ಸೇರಿದೆ. ಭಾರತ ಸರ್ಕಾರದ ನಾಗರಿಕ ವಿಮಾನ ಶಾಖೆ ದೇಶದ ಎಲ್ಲ ವಿಮಾನ ನಿಲ್ದಾಣಗಳ ಅಭಿವೃದ್ಧಿಗೂ ಆಡಳಿತಕ್ಕೂ ಜವಾಬ್ದಾರಿಯಾಗಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಾದ ಮುಂಬಯಿ, ಕಲ್ಕತ್ತ, ದೆಹಲಿ ಮತ್ತು ಮದ್ರಾಸ್ ನಿಲ್ದಾಣಗಳ ಆಡಳಿತ ಹಾಗೂ ಅಭಿವೃದ್ಧಿಗೆ ಪ್ರತ್ಯೇಕ ಇಂಟರ್‍ನ್ಯಾಷನಲ್ ಏರ್‍ಫೊಟ್ಸ್ ಅಥಾರಿಟಿ ಆಫ್ ಇಂಡಿಯ ಎಂಬ ಸಂಸ್ಢೆ ಇದೆ. ಇಂಡಿಯ ಮೀಟರಿಯಲಾಜಿಕಲ್ ಡಿಪಾರ್ಟಮೆಂಟ್, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೀಟಿಯೊರಾಲಜಿ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಅಸ್ಟ್ರೋಫಿಸಿಕ್ಸ್ ಮತ್ತು ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಮ್ ಇವು ವಿಮಾನ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾತ್ರ ಹೊಂದಿರುವ ಮುಖ್ಯ ಸಂಸ್ಧೆಗಳು. ವಿಮಾನ ಸಾರಿಗೆ ವ್ಯವಸ್ಥೆಗಾಗಿ ಎರಡು ಕಾರ್ಪೋರೇಷನ್ನುಗಳು 1953ರಲ್ಲಿ ಸ್ಧಾಪಿಸಲ್ಪಟ್ಟವು. ಇಂಡಿಯನ್ ಏರ್‍ಲೈನ್ಸ್ ಕಾರ್ಪೋರೇಷನ್ ಆಂತರಿಕ ವಿಮಾನಯಾನ ಸೇವೆಯನ್ನೂ ಏರ್ ಇಂಡಿಯಾ ಕಾರ್ಪೋರೇಷನ್ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಯನ್ನೂ ನೀಡುತ್ತಲಿವೆ. ವಿಮಾನಯಾನ ಅಭಿವೃದ್ಧಿಗಾಗಿ ಯೋಜನೆಗಳಲ್ಲಿ 1951-79 ಅವಧಿಯಲ್ಲಿ ಒಟ್ಟು 707 ಕೋಟಿ ರೂಪಾಯಿಗಳ ವೆಚ್ಚ ಮಾಡಲಾಗಿದೆ. ದೇಶದಲ್ಲಿರುವ 84 ವಿಮಾನನಿಲ್ದಾಣಗಳನ್ನು ಉತ್ತಮಗೊಳಿಸಲೂ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲೂ ಈ ಹಣ ಮುಖ್ಯವಾಗಿ ವೆಚ್ಚವಾಗಿದೆ. 1950-72 ಅವಧಿಯಲ್ಲಿ ಅಂತಾರಾಷ್ಟೀಯ ವಿಮಾನಯಾನ ಮಾಡುವವರ ಸಂಖ್ಯೆ ನಾಲ್ಕರಷ್ಟೂ ಸರಕು ಸಾಗಣೆ ಎಂಟರಷ್ಟೂ ಹೆಚ್ಚಿವೆ. ಅದೇ ಅವಧಿಯಲ್ಲಿ ಆಂತರಿಕ ವಿಮಾನಯಾನ ಮಾಡಿದವರ ಸಂಖ್ಯೆ ಒಂಬತ್ತರಷ್ಟು ಹೆಚ್ಚಿದೆ. ಆದರೆ ಸರಕು ಸಾಗಣೆ ಇಳುವರಿಯಾಗಿದೆ. ವಿಮಾನವನ್ನು ಇನ್ನೂ ಹೆಚ್ಚಾಗಿ ಉಪಯೋಗಿಸಿ ಕೊಳ್ಳುಬಹುದಾದ ಅವಕಾಶವಿದೆ.

	ಆರೋಗ್ಯ ಹಾಗೂ ವೈದ್ಯಕೀಯ ಸೇವೆಗಳು: ಯಾವುದೇ ರಾಷ್ಟ್ರದ ಅಭಿವೃದ್ಧಿಯ ವೀಕ್ಷಣೆಯಲ್ಲಿ ಅಲ್ಲಿಯ ಜನತೆಯ ವಿದ್ಯಾಭ್ಯಾಸ, ಸಾಂಸ್ಕ್ರತಿಕ ಜೀವನ ಮಟ್ಟ, ಆರೋಗ್ಯ ಮತ್ತು ಆಯುಃಪ್ರಮಾಣ ಇವುಗಳ ಬದಲಾವಣೆಯನ್ನೂ ಗಮನಿಸಬೇಕು. ಇವುಗಳ ಮೇಲೆ ಪ್ರಭಾವ ಬೀರಿರುವ ಸಮಾಜಸೇವಾ ಕಾರ್ಯಕ್ರಮಗಳು ಭಾರತದ ಯೋಜನೆಯ ಒಂದು ಭಾಗವಾಗಿವೆ. ಆರೋಗ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವುದರಲ್ಲಿ ಪಂಚವಾರ್ಷಿಕ ಯೋಜನೆಗಳು ಅನುಮೋದಿಸಿದ ಉದ್ದೇಶಗಳು ಇವು: ಮರಣದರ ಇಳಿವ, ಹಾಗೂ ಜನರ ನಿರೀಕ್ಷಿತ ಸರಾಸರಿ ಆಯುಸ್ಸನ್ನು ಹೆಚ್ಚಿಸುವುದು; ಮಲೇರಿಯ, ಸಿಡುಬು, ಕಾಲರ, ಕ್ಷಯ ಇತ್ಯಾದಿ ರೋಗಗಳನ್ನು ನಿರ್ಮೂಲಗೊಳಿಸುವುದು ಖಾಯಿಲೆ ನಿರೋಧಕ, ಖಾಯಿಲೆ ಗುಣ ಮಾಡುವ ಮತ್ತು ಆರೋಗ್ಯ ಉತ್ತಮಗೊಳಿಸುವಂಥ ವೈದ್ಯಕೀಯ ಸೇವೆಗಳನ್ನು ನಗರ ಮತ್ತು ಗ್ರಾಮೀಣ ಜನತೆಗೆ ಒದಗಿಸುವುದು. ಈ ಉದ್ದೇಶಗಳ ಸಾಧನೆಗಾಗಿ 1951-79 ಯೋಜನಾವಧಿಯಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ ಸರ್ಕಾರ ರೂ 4,286 ಕೋಟಿ ವೆಚ್ಚಮಾಡಿದೆ. ಸ್ಧಾಪನೆಯಾದ ಸಂಸ್ಥೆಗಳ ಕಾರ್ಯಾಚರಣೆ ನಡೆಕೊಂಡು ಬರುವ ವೆಚ್ಚ ಇದರಲ್ಲಿ ಸೇರಿರುವುದಿಲ್ಲ. ಅಲ್ಲದೆ ವೈದ್ಯಕೀಯ ಸೇವೆಗೆ ಖಾಸಗಿ ವಲಯದಲ್ಲಿಯೂ ಜನರಿಂದ ಹಣ ಹೂಡಲ್ಪಟ್ಟಿದೆ. 1950-51 ಮತ್ತು 1974-75ರ ಅವಧಿಯಲ್ಲಿ ವೈದ್ಯಕೀಯ ಕಾಲೇಜುಗಳು 33ರಿಂದ 121ಕ್ಕೂ ವರ್ಷದಲ್ಲಿ ಪ್ರವೇಶ ನೀಡಲಾದ ವೈದ್ಯಕೀಯ ವಿದ್ಯಾರ್ಥಿಗಳ ಸಂಖ್ಯೆ 2,693 ರಿಂದ 13,680ಕ್ಕೂ ಆಸ್ಪತ್ರೆಗಳು ಮತ್ತು ಆರೋಗ್ಯಕೇಂದ್ರಗಳು 9,608ರಿಂದ 2,553 ಕ್ಕೂ ಹೆಚ್ಚಿರುವುದು ವೈದ್ಯಕೀಯ ಸೇವೆಗಳ ವಿಸ್ತರಣೆ ಹಾಗೂ ಸಾಧನೆಗಳ ಪರಮಾಣವನ್ನು ಸೂಚಿಸುವುವು. ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳು ಭಾಗಶಃ ಯಶಸ್ವಿಯಾಗಿದೆ. ಕುಡಿಯುವ ಶುದ್ಧನೀರು ಸರಬರಾಜು ಕಾರ್ಯಕ್ರಮಗಳು ಮತ್ತು ಕೊಳಚೆ ನಿರ್ಮೂಲನ ಹಾಗೂ ಒಳಚರಂಡಿ ವ್ಯವಸ್ಧೆ ದೇಶದ ಎಲ್ಲ ಪಟ್ಟಣಗಳಿಗೂ ಹರಡಿಲ್ಲ. ಈ ಬಗ್ಗೆ ಗ್ರಾಮಗಳ ಪರಿಸ್ಥಿತಿ ನಗರಗಳಲ್ಲಿರುವ ಪರಿಸ್ಥಿತಿಗಿಂತಲೂ ಹೆಚ್ಚು ಅತೃಪ್ತಿಕರವಾಗಿದೆ. ಜನತೆಯ ಆರೋಗ್ಯಾಭಿವೃದ್ಧಿ ದೃಷ್ಟಿಯಿಂದ ಇಂಥ ಕಾರ್ಯಕ್ರಮಗಳಿಗೆ ಯೋಜನೆಗಳಲ್ಲಿ ಹೆಚ್ಚಿನ ಪ್ರಾಮುಖ್ಯ ನೀಡಬೇಕು. ದೇಶದಲ್ಲಿ ಮರಣದರ 1951ರಲ್ಲಿ ಜನಸಂಖ್ಯೆಯ 1000ಕ್ಕೆ 27 ಇದ್ದುದು 1971ರ ವೇಳೆಗೆ 15ಕ್ಕೆ ಇಳಿದುದೂ ಇದೇ ಅವಧಿಯಲ್ಲಿ ಜನತೆಯ ಸರಾಸರಿ ಆಯಃಪ್ರಮಾಣ 32 ವರ್ಷಗಳಿಂದ 50 ವರ್ಷಗಳಿಗೆ ಏರಿದುದೂ ಗಮನಾರ್ಹ ಅಭಿವೃದ್ಧಿ ಸೂಚಕಗಳಾಗಿವೆ.

	ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸುವುದು ಭಾರತದ ಅಭಿವೃದ್ಧಿ ಯೋಜನೆಯ ಒಂದು ಮುಖ್ಯನೀತಿ. ಆದರ, ನಾಲ್ಕನೆಯ ಯೋಜನೆಯತನಕ ಕುಟುಂಬಯೋಜನೆ ಕಾರ್ಯಕ್ರಮಗಳಿಗಾಗಿ ಕೈಗೊಂಡ ಯೋಜನಾ ವೆಚ್ಚ ಅಲ್ಪವೇ ಆಗಿತ್ತು. ಯೋಜನಾಯುಗದ ಮೊದಲ ದಶಕದಲ್ಲಿ ಕೇವಲ ರೂ 3.7 ಕೋಟಿ, ಮೂರನೆಯ ಯೋಜನೆಯಲ್ಲಿ ರೂ 27 ಕೋಟಿ ಕುಟುಂಬ ಯೋಜನೆಗಾಗಿ ವೆಚ್ಚವಾಯಿತು. ಈ ವೆಚ್ಚವನ್ನು ನಾಲ್ಕನೆಯ ಯೋಜನೆಯಲ್ಲಿ ರೂ 278 ಕೋಟಿಗೂ ಐದನೆಯ ಯೋಜನೆಯಲ್ಲಿ ರೂ 497 ಕೋಟಿಗೂ ಹೆಚ್ಚಿಸಲಾಯಿತು. 1978-83ನೆಯ ಯೋಜನೆಯಲ್ಲಿ `ಕುಟುಂಬಕಲ್ಯಾಣ' ಎಂಬುದಾಗಿ ಕರೆಯಲ್ಪಟ್ಟ ಹಿಂದಿನ ಕುಟುಂಬ ಯೋಜನೆಗೆ ರೂ 765 ಕೋಟಿ ವೆಚ್ಚದ ಕಾರ್ಯಕ್ರಮಗಳನ್ನು ರೂಪಿಸಲಾಯಿತು. ಜನನದರ ಇಳಿವರಿ ಕುಟುಂಬ ಯೋಜನೆಯ ಯಶಸ್ಸನ್ನು ಅಳೆಯುವ ಮುಖ್ಯ ಸೂಚ್ಯಂಕ. ಇದರ ಪ್ರಕಾರ ಯೋಜನಾಯುಗದ ಮೊದಲ ಎರಡು ದಶಕಗಳಲ್ಲಿ. 1941-51ರ ದಶಕದಲ್ಲಿ ಇದ್ದಂತೆಯೇ ಜನನದರವು ಜನಸಂಖ್ಯೆಯ ಸರಾಸರಿ 1000ಕ್ಕೆ ಸುಮಾರು 40ರಷ್ಟೇ ಆಗಿತ್ತು. ಇದರಿಂದ ಕುಟುಂಬ ನಿಯಂತ್ರಣ ಕ್ರಮಗಳ ಯಾವ ಪರಿಣಾಮವೂ ಆಗಿಲ್ಲವೆಂಬುದು ಸ್ಪಷ್ಟವಾಗುವುದು. ಅದರ 70ರ ದಶಕದಲ್ಲಿ ಈ ಕಾರ್ಯಕ್ರಮಗಳ ಯಶಸ್ಸು ಕಾಣಬರುವ ಒಂದು ಹೊಸ ಒಲವು ಮೂಡಿದೆ. 1974ರ ವೇಳೆಗೆ ಜನನದರ ಜನಸಂಖ್ಯೆಯ ಸರಾಸರಿ 1000ಕ್ಕೆ 35ಕ್ಕೂ 1977-78ರಲ್ಲಿ 33ಕ್ಕೂ ಇಳಿದಿರುವುದು ಉದ್ದೇಶಿತ ಜನಸಂಖ್ಯಾ ಬೆಳೆವಣಿಗೆ ನಿಯಂತ್ರಣದ ಬಗ್ಗೆ ಆಶಾದಾಯಕ ಚಿಹ್ನೆಯಾಗಿದೆ. ಆದರೆ ಮರಣದರ ಇಳಿವರಿ ಇದಕ್ಕೂ ವೇಗವಾದ ದರದಲ್ಲಿ ಇಳಿಯುತ್ತ ಬಂದಿರುವುದರಿಂದ ಜನಸಂಖ್ಯಾ ಹೆಚ್ಚುವರಿ ಮಟ್ಟವನ್ನು ಯುಕ್ತವಾಗಿ ಸ್ಥಿಮಿತಗೊಳಿಸಿ ಬೇಕಾದರೆ ಜನನದರ ಇನ್ನೂ ಗಮನಾರ್ಹವಾಗಿ ಇಳಿಯಬೇಕಾದ ಅವಶ್ಯಕತೆ ಇದೆ.

	ಶಿಕ್ಷಣ ಕ್ಷೇತ್ರದ ಪ್ರಗತಿ: ವಿದ್ಯಾಭ್ಯಾಸ ಕುರಿತ ಭಾರತದ ಯೋಜನೆಗಳ ಮುಖ್ಯ ಉದ್ದೇಶಗಳಿವು: ಎಲ್ಲ ಮಕ್ಕಳಿಗೂ ಉಚಿತ ಪ್ರಾಥಮಿಕ ಶಿಕ್ಷಣ; ಮಾನವಶಕ್ತಿ ಯೋಜನೆಯ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅವಶ್ಯಕವಾದ ವಿವಿಧ ರೀತಿಯ ನುರಿತ ಮಾನವ ಬಲದ ಪೂರೈಕೆ, ಶಿಕ್ಷಣದಲ್ಲಿ ಗುಣಮಟ್ಟ ಉತ್ತಮಗೊಳಿಸುವುದು; ವೈಜ್ಞಾನಿಕ ಹಾಗೂ ತಾಂತ್ರಿಕ ಸಂಶೋಧನೆ ಬೆಳೆಸುವುದು; ಜನತೆಯಲ್ಲಿ ಸಾಮಾಜಿಕಾರ್ಥಿಕ ಬದಲಾವಣಿಗೆ ಅನುಕೂಲಕರವಾದ ಮನೋಭಾವ ಹುಟ್ಟುಸಿ ಪೋಷಿಸುವುದು. ಮೇಲಿನ ಉದ್ದೇಶಗಳ ಸಾಧನೆಗಾಗಿ ಕೈಗೊಂಡ ಶಿಕ್ಷಣಾಭಿವೃದ್ಧಿ ಯೋಜನೆಗಳಿಗೆ ಸರ್ಕಾರ 1951-79 ಅವಧಿಯಲ್ಲಿ ಒಟ್ಟು ರೂ 4.044 ಕೋಟಿ ವೆಚ್ಚಮಾಡಿತು. ಈ ವೇಳೆ ನಿರ್ಮಿಸಲಾದ ಸಂಸ್ಥೆಗಳನ್ನು ನಡೆಸಿಕೊಂಡು ಬರಲು ತಗಲುವ ವೆಚ್ಚಕ್ಕೂ ಆಯಾ ಮುಂಗಡಪತ್ರಗಳಲ್ಲಿ ಹಣ ಒದಗಿಸಲಾಯಿತು. ಈ ವೆಚ್ಚವೂ ಖಾಸಗಿ ವಲಯದಲ್ಲಿ ಶಿಕ್ಷಣಕ್ಕಾಗಿ ಕೈಗೊಳ್ಳಲಾದ ವೆಚ್ಚವೂ ಸೇರಿ ದೇಶದಲ್ಲಿ ವಿವಿಧ ರೀತಿಯ ಶಿಕ್ಷಣಕ್ಕೆ ಬೇಕಾದ ಸಂಸ್ಥೆಗಳೂ ಸಾಧನಗಳೂ ಸಿಬ್ಬಂದಿಯೂ ಬೆಳೆಯಲು ಸಹಾಯಕವಾಗಿವೆ. 1950-51 ಮತ್ತು 1973-74 ಅವಧಿಗಳಲ್ಲಿ ಪ್ರಾಥಮಿಕ ಶಾಲೆಗಳು 2.1 ಲಕ್ಷದಿಂದ 4.3 ಲಕ್ಷಕ್ಕೂ ಮಾಧ್ಯಮಿಕ ಶಾಲೆಗಳು 13.6 ಸಾವಿರದಿಂದ 97.4 ಸಾವಿರಕ್ಕೂ ಪ್ರೌಢಶಾಲೆಗಳು 7,288ರಿಂದ 40,127ಕ್ಕೂ ಎಲ್ಲ ವಿವಿಧ ಕಾಲೇಜುಗಳೂ ಸೇರಿ 695ರಿಂದ 4,308ಕ್ಕೂ ಹೆಚ್ಚಿವೆ. ಇವುಗಳ ಜೊತೆಗೆ ಅನೇಕ ಸಂಶೇಧನಾ ಕೇಂದ್ರಗಳು ಸ್ಥಾಪಿಸಲ್ಪಟ್ಟಿವೆ. ವಯಸ್ಕರ ಶಿಕ್ಷಣ ವ್ಯವಸ್ಥೆ ವಿಸ್ತರಿಸಲ್ಪಟ್ಟಿದೆ. ಹೀಗೆ ನಿರ್ವಹಿಸಲಾದ ಯೋಜನಾ ಕ್ರಮಗಳ ಫಲವಾಗಿ ವಿವಿಧ ಹಂತಗಳ ವಿದ್ಯಾಭ್ಯಾಸದಲ್ಲಿ ಪ್ರಗತಿಯಂಟಾಗಿದೆ.

	1973-74ರ ವೇಳೆಗೆ 6 ವರ್ಷದಿಂದ 11 ವರ್ಷ ವಯಸ್ಸಿನ ಒಳಗಿರುವ ಮಕ್ಕóಳ ಸಂಖ್ಯೆಯ ಶೇಕಡಾ 83.5ರಷ್ಟು ಮಕ್ಕಳು ಪ್ರಾಥಮಿಕ ಶಾಲೆಘಳಿಗೆ ಸೇರಿದ್ದರು. ದೇಶದ ಎಲ್ಲ ಮಕ್ಕಳಿಗೂ ಪ್ರಾಥಮಿಕ ವಿದ್ಯಾಭ್ಯಾಸ ನೀಡಿರಬೇಕೆಂಬ ಹಿಂದಿನ ಘೋಷಣೆಯನ್ನು ನೆನಪಿಗೆ ತಂದುಕೊಂಡರೆ ಈಗ ಆಗಿರುವ ಸಾಧನೆ ತೃಪ್ತಿಕರವಾಗಿಲ್ಲ. ಅಲ್ಲದೆ, 6.11 ವರ್ಷಗಳ ಅವಧಿಯಲ್ಲಿರುವ ಮಕ್ಕಳ ಪೈಕಿ ಶೇಕಡಾ 83.5ರಷ್ಟು ಮಕ್ಕಳು ಶಾಲೆಗಳಿಗೆ ಸೇರಿರುವುದಾಗಿ ದಾಖಲೆಯಾಗಿದ್ದರೂ 11-14 ವರ್ಷಗಳ ಅವಧಿಯಲ್ಲಿರುವ ಮಕ್ಕಳಲ್ಲಿ ಶಾಲೆಗೆ ಹೋಗುತ್ತಿರುವ ಮಕ್ಕಳ ಪ್ರಾಥಮಿಕ ವಿದ್ಯಾಭ್ಯಾಸದ ಉದ್ದೇಶ ಸಾಧನೆಯಾದಂತಾಗಿಲ್ಲ. ವಯಸ್ಕರ ಅನಕ್ಷರತಾ ನಿವಾರಣೆಯಲ್ಲಿ ಸ್ಪಲ್ಪಮಟ್ಟಿನ ಪ್ರಗತಿಯಾಗಿರುವುದಾದರೂ ಇನ್ನೂ ಅನಕ್ಷರಸ್ಥರ ಜನತೆಯ ಭಾಗ ಗಣನೀಯ ಪ್ರಮಾಣದಲ್ಲಿಯೇ ಇದೆ. ಒಟ್ಟು ಜನತೆಯಲ್ಲಿ ಅಕ್ಷರಸ್ಧರ ಭಾಗ ಗಣನೀಯ ಪ್ರಮಾಣದಲ್ಲಿಯೇ ಇದೆ. ಒಟ್ಟು ಜನತೆಯಲ್ಲಿ ಅಕ್ಷರಸ್ಥರ ಭಾಗ 1951ರಲ್ಲಿ ಶೇಕಡಾ 16.6 ಇದ್ದುದು 1971ರಲ್ಲಿ ಕೇವಲ 29.4ಕ್ಕೆ ಹೆಚ್ಚಿದ್ದಿತು. ವಿದ್ಯಾಭ್ಯಾಸದ ಒಟ್ಟು ಯೋಜನಾ ವೆಚ್ಚದಲ್ಲಿ ಶೇಕಡಾ 1ರಷ್ಟು ಭಾಗ ಮಾತ್ರ ವಯಸ್ಕರ ಶಿಕ್ಷಣಕ್ಕೆ ನಿಯೋಜಿಸಲ್ಪಟ್ಟುದು ಅತ್ಯಲ್ಪವಾಗಿದ್ದುದನ್ನು ಗಮನಿಸಿ 1978-83ರ ಹೊಸಯೋಜನೆಯಲ್ಲಿ ಶೇಕಡಾ 10ರಷ್ಟನ್ನು ಈ ಬಾಬಿಗೆ ನಿಗದಿಮಾಡಲಾಗಿದೆ.

	ಪ್ರೌಢಶಾಲೆ, ಕಾಲೇಜ್ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಬೆಳೆದಿದೆ. ಇದರಿಂದ ಹೆಚ್ಚು ಯುವಕ ಯುವತಿಯರಿಗೆ ಉನ್ನತ ವ್ಯಾಸಂಗದ ಫಲ ದೊರೆತಿದೆ. ಆದರೆ, ವಿದ್ಯಾಭ್ಯಾಸ ಮತ್ತು ತಾಂತ್ರಿಕ ಶಿಕ್ಷಣ ಆ ಯೋಜನೆ ವಿವಿಧ ಆರ್ಥಿಕ ಕ್ಷೇತ್ರಗಳ ಅಭಿವೃದ್ಧಿಯೋಜನೆಗಳಿಗೆ ಹೊಂದಿಕೊಳ್ಳುವಂತಾಗಲು ಜಾರಿಯಲ್ಲಿರುವ ಮಾನವ ಶಕ್ತಿ ಯೋಜನೆಯ ತಂತ್ರವನ್ನು ಉತ್ತಮಗೊಳಿಸಬೇಕಾಗಿದೆ.

	ಇತರ ಕ್ಷೇತ್ರಗಳು: ಭಾರತೀಯ ಸಂಸ್ಕ್ರತಿ ಹಾಗೂ ಧಾರ್ಮಿಕ ಮೌಲ್ಯಗಳನ್ನು ಉಳಿಸಿಕೊಂಡುಬರುವುದೂ ಭಾರತ ಜನಾಂಗದ ಆಕಾಂಕ್ಷೆಯಾಗಿದೆ. ಆಧುನಿಕ ತಾಂತ್ರಿಕ ನಾಗರಿಕತೆಯನ್ನು ಅಂಗೀಕರಿಸಿರುವುದರ ಜೊತೆಗೆ ಈ ಮಾನವಿಕ ಮೌಲ್ಯಪೋಷಿಸುವುದೂ ಭಾರತದ ಅಭಿವೃದ್ಧಿ ಪ್ರಯತ್ನದ ಭಾಗವಾಗಿದೆ ಅಲ್ಲದೆ ಭಾರತದ ವಿವಿಧಭಾಷೆಗಳ ಮತ್ತು ಅವುಗಳ ಸಾಹಿತ್ಯದ ಬೆಳೆವಣಿಗೆಗೂ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಬೆಳೆಸುವುದಕ್ಕೂ ಸಂಗೀತ, ನಾಟಕ, ನೃತ್ಯ, ಗಮಕ, ಸಿನಿಮಾ ಇತ್ಯಾದಿಕಲೆಗಳ ಅಭಿವೃದ್ಧಿಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ರೀತಿಯ ಉತ್ತೇಜಕ ಕ್ರಮಗಳನ್ನು ಕೈಗೊಂಡಿವೆ.

	ಆಧುನಿಕ ಜಗತ್ತಿನೊಡನೆ ಸರಿಸಮಾನವಾಗಿ ಮುಂದುವರಿಯುವುದರಲ್ಲಿ ಹಿಂದಿನ ಜಡತ್ವವನ್ನು ತೊರೆದು ಭಾರತ 1951ರಿಂದ ಆರಂಭಿಸಿದ ತನ್ನ ಯೋಜನಾಯುಗದಲ್ಲಿ ಮುನ್ನಡೆಯ ಹತ್ತಿದೆ ಎಂಬುದು ಸುಸ್ಪಷ್ಟ. ಆದರೆ, ಅಭಿವೃದ್ಧಿ ಭಾವನೆಯ ಬಗ್ಗೆ ವಿವಿಧ ಪ್ರಾಕಾರಗಳ-ರಾಜಕೀಯ, ಆರ್ಥಿಕ, ಸಾಮಾಜಿಕ, ಸಾಂಸ್ಕ್ರತಿಕ, ಪರಿಸರ ಮೌಲ್ಯ ರಕ್ಷಣೆ, ಧಾರ್ಮಿಕ ಇತ್ಯಾದಿ-ಸಂಯೋಜಿತ ಅರ್ಥದ ಮೇಲೆ ಆಧಾರವಾದ ಯೋಜನೆಯನ್ನು ಅನುಸರಿಸಿಲ್ಲದಿರುವುದರಿಂದಲೂ ಯೋಜನಾ ತಂತ್ರಗಳ ಲೋಪದೋಷಗಳಿಂದಲೂ ಯೋಜನೆಗಳ ಅನುಷ್ಠಾನದಲ್ಲಿ ಆದಕ್ಷತೆ ಹಾಗೂ ರಾಜಕೀಯ ಮಿಶ್ರಿತ ಧೋರಣೆಯ ನಿರ್ವಹಣೆಯಿಂದಲೂ ಅಭಿವೃದ್ಧಿಗೆಂದು ಹೂಡಲಾದ ಬಂಡವಾಳದ ಪೂರ್ಣ ಪ್ರಯೋಜನ ಫಲಿಸಿಲ್ಲವೆಂದು ಹೇಳಬಹುದು. ಅವುಗಳಲ್ಲಿ ಹೊಡಲಾದ ಬಂಡವಾಳಕ್ಕೆ ತಕ್ಕಲಾಭ ದೊರಕುದುದರಿಂದ ಈ ಮೂಲದಿಂದ ಅಭಿವೃದ್ಧಿ ಬಂಡವಾಳ ಸಂಚಯನಕ್ಕೆ ಆಗಬೇಕಾಗಿದ್ದ ಸಹಾಯ ಸಿಗಲಿಲ್ಲ. ಜೊತೆಗೆ ವಿದೇಶಿ ಆಕ್ರಮಣಗಳಿಂದ ಯುದ್ಧ ಮುಂತಾದವು ಭಾರತದ ಮುನ್ನಡೆಯನ್ನು ತಡೆಹಿಡಿದವೆಂದು ಹೇಳಬಹುದು. ಭಾರತದ ಆರ್ಥಿಕ ರಚನೆಯಲ್ಲಿ ಕಾರ್ಮಿಕ ಬಲದ ಶೇಕಡಾ 70-74ರಷ್ಟು ಭಾಗ ಕೃಷಿ ಉದ್ಯಮದಲ್ಲಿ ನಿರತವಾಗಿರುವುದು ದೇಶದ ಆರ್ಥಿಕ ರಚನೆಯಲ್ಲಿ ಅವಶ್ಯ ಆಗಬೇಕಾದ ಪರಿವರ್ತನೆ ಆಗಿಲ್ಲವೆಂಬುದನ್ನು ತೋರಿಸುವುದು. ಒಂದು ದೇಶ ಅಭಿವೃದ್ಧಿಯಾದಂತೆ ಕೃಷಿ ಉದ್ಯಮದ ಕಾರ್ಮಿಕ ಬಲ ಶೇಕಡಾ ಭಾಗ ಸಾಪೇಕ್ಷವಾಗಿ ಇಳಿಯುವುದೂ ಕೈಗಾರಿಕೆ ಮತ್ತು ಸೇವಾ ಉದ್ಯಮ ವಿಭಾಗಗಳಲ್ಲಿ ಹೆಚ್ಚುವುದೊ ಅನುಭವಿಸಿದ್ದ ವಿಷಯ.

	ಭಾರತದ ಯೋಜನೆಗಳು ಸಾಮಾನ್ಯವಾಗಿ ಕಾಲಕಾಲಕ್ಕೆ ಹೆಚ್ಚುವ ಕಾರ್ಮಿಕ ಬಲಕ್ಕಾದರೂ ಉದ್ಯೋಗವಕಾಶ ಕಲ್ಪಿಸುವ ಗುರಿ ಹೊಂದಿದ್ದವಾದರೂ ಈ ಉದ್ದೇಶದಲ್ಲಿ ವಿಫಲವಾಗಿ ವಾಸ್ತವವಾಗಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತ ಬಂದಿರುವುದು ಅಭಿವೃದ್ಧಿಯಲ್ಲಿಯ ಕುಂದುಕೊರತೆಗಳನ್ನು ಸೂಚಿಸುವ ಒಂದು ಅಂಶವಾಗಿದೆ.

	ನೀರಾವರಿ, ವಿದ್ಯುಚ್ಛಕ್ತಿ, ಸಾರಿಗೆ, ಕೈಗಾರಿಕೆ, ವೈದ್ಯಕೀಯ ಸೇವೆಗಳು, ವಿದ್ಯಾಭ್ಯಾಸ ಇಂಥ ವಿವಿಧ ಕ್ಷೇತ್ರಗಳಲ್ಲಿಯೂ ಸಾಧಿಸಿರುವ ಅಭಿವೃದ್ಧಿ ದೇಶದ ನಾನಾ ಭಾಗಗಳಲ್ಲಿ ಸಮಾನವಾಗಿರದೆ, ತೀವ್ರತರವಾದ ಪ್ರಾದೇಶಿಕ ಅಸಮಾನತೆ ಇರುವುದನ್ನು ಹಿಂದೆ ಸೂಚಿಸಲಾಗಿದೆ. ಈ ಪ್ರಾದೇಶಿಕ ಅಸಮಾನತೆಗೆ ಅನೇಕ ಕಾರಣಗಳಿದ್ದರೂ ಭಾರತದ ಯೋಜನೆಗಳು ಕೇವಲ ಉದ್ಯಮ ವಿಭಾಗಗಳ ಕಡೆಗೆ ವಿಶೇಷ ಗಮನ ಕೊಟ್ಟು ಪ್ರಾದೇಶಿಕ ದೃಷ್ಟಿಕೋನಕ್ಕೆ ಸಲ್ಲಬೇಕಾಗಿದ್ದ ಗಮನ ಕೊಡಲಿಲ್ಲ. ಯೋಜನೆಗಳು ಸ್ಥಳೀಯ ಘಟಕಗಳಿಂದಲೂ ಸಿದ್ಧಪಡಿಸಲ್ಪಟ್ಟು ಕೇಂದ್ರದಿಂದಲೂ ಸಿದ್ಧವಾಗುವ ಯೋಜನೆಗಳೊಡನೆ ಪರಸ್ಪರ ಹೊಂದಾಣಿಕೆಗೊಳಿಸಲ್ಪಡುವ ಯೋಜನಾ ವಿಧಾನ ಇತ್ತೀಚಿಗೆ ಬೆಳೆಯುತ್ತಿರುವುದರಿಂದ ಪ್ರಾದೇಶಿಕ ಅಂಶಕ್ಕೆ ಸಲ್ಲಬೇಕಾದ ಪ್ರಾಮುಖ್ಯ ಮುಂಬರಲಿರುವ ಯೋಜನೆಗಳಲ್ಲಿ ಕಾಣಬಹುದೆಂದು ನಿರೀಕ್ಷಿಸಲಾಗಿದೆ. ಈ ವರೆಗಿನ ಯೋಜನಾನುಭವಗಳ ಮೇಲೆ 1978-83ರ ಯೋಜನೆ ಹೊಸ ನೀತಿ ರೀತಿಗಳನ್ನು ಅನುಸರಿಸಿದೆ. ಜನತೆಗೆ ಕನಿಷ್ಠ ಮೂಲ ಆವಶ್ಯಕತೆಗಳ ಒದಗಣೆ, ಬಡತನ ನಿರ್ಮೂಲನ, ನಿರುದ್ಯೋಗ ನಿವಾರಣೆ, ಹಿಂದುಳಿದ ಜನಾಂಗಗಳ ಸಮಸ್ಯೆಗಳಿಗೆ ವಿಶೇಷ ಗಮನ ನೀಡುವುದರ ಮೂಲಕ ಆರ್ಥಿಕ ಸಾಮಾಜಿಕ ಅಂತರ ಕಡಿಮೆ ಮಾಡುವಿಕೆ, ಗಾಮೀಣ ಪ್ರದೇಶಗಳ ಅಭಿವೃದ್ಧಿಗೆ ಅಧಿಕ ಆದ್ಯತೆ ಇತ್ಯಾದಿ ಅಂಶಗಳನ್ನು ಒತ್ತಿಹೇಳಿರುವ ಈ ಯೋಜನೆ ಭಾರತದ ಜನತೆಗೆ ಸರ್ವತೋಮುಖವಾಗಿ ಹೆಚ್ಚು ಫಲದಾಯಕವಾಗುವಂಥ ಅಭಿವೃದ್ಧಿಯನ್ನು ಸಾಧಿಸುವುದೆಂದು ಆಶಿಸಬಹುದಾಗಿದೆ. ಆದರೆ ಹೀಗೆ ಫಲದಾಯಕವಾಗಬೇಕಾದರೆ ಯೋಜನಾ ತಂತ್ರಗಳನ್ನು ಉತ್ತಮಗೊಳಿಸುವುದೂ ಯೋಜನೆಯ ಅನುಷ್ಠಾನದಲ್ಲಿ ಆಡಳಿತ ದಕ್ಷತೆ ಹೆಚ್ಚಿಸುವುದೂ ಸಾರ್ವಜನಿಕ ಕ್ಷೇತ್ರವನ್ನು ಕಲುಷಗೊಳಿಸಿ ವೆಚ್ಚಕ್ಕೆ ತಕ್ಕ ಪ್ರತಿಫಲದೊರಕದಂತೆ ಮಾಡಿರುವ ಅಂಶಗಳಲ್ಲಿ ಒಂದಾದ ಭ್ರಷ್ಟಾಚಾರ ಹಾಗೂ ಅನೀತಿಯುತ ಆರ್ಥಿಕ ವ್ಯವಹಾರಗಳನ್ನು ತೊಡೆದು ಹಾಕುವುದೂ ಆವಶ್ಯಕ. ಯೋಜನೆಗಳಲ್ಲಿ ನಿಗದಿಮಾಡಲಾಗುವ ಗುರಿ ಮತ್ತು ತರುವಾಯ ವಾಸ್ತವವಾಗಿ ಕೈಕೊಳ್ಳಲಾಗುವ ವಿತರಣೆ ಇವುಗಳಲ್ಲಿ ತೀವ್ರ ಅಂತರವಿರದಂತೆ ನೋಡಿಕೊಳ್ಳುವುದೂ ವಿವಿಧ ಉದ್ಯಮ ಕ್ಷೇತ್ರಗಳಲ್ಲಿ ಒಂದೊಂದು ಉದ್ಯಮ ಕ್ಷೇತ್ರದ ವಿವಿಧ ವಿಭಾಗಗಳೊಳಗೂ ಇರತಕ್ಕ ಪರಸ್ಪರ ಸಂಬಂಧಗಳನ್ನು ಅಧ್ಯಯನ ಮಾಡಿ ಅಸಮತೋಲಗಳಿಗೆ ಎಡೆಯಾಗದಂತೆ ಯೋಜನೆಗಳನ್ನು ರೂಪಿಸುವುದೂ ನಿರ್ದೇಶನ ಹಾಗೂ ನಿಯಂತ್ರಣಗಳಲ್ಲಿ ಉತ್ತಮ ಸಂಬಂಧ ರೂಪಿಸುವುದೂ ಯೋಜನಾ ತಂತ್ರ ಉತ್ತಮಗೊಳಿಸುವ ಕಾರ್ಯಕ್ಕೆ ಸೇರುವ ಮುಖ್ಯ ಅಂಶಗಳಾಗಿವೆ.
(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ